ಮಂಗಳೂರು, ಆ 26 (Daijiworld News/MSP): ನೂತನವಾಗಿ ಉದ್ಘಾಟನೆಗೊಂಡು, ಇನ್ನೂ ಸಾರ್ವಜನಿಕವಾಗಿ ಲೋಕಾರ್ಪಣೆಗೊಳ್ಳದ , ನಗರದ ಉರ್ವದಲ್ಲಿರುವ ನೂತನ ಮಾರುಕಟ್ಟೆಯಿಂದ ಹೆಚ್ಚು ಕಡಿಮೆ 15 ಕ್ಕೂ ಹೆಚ್ಚು ಸಿಲಿಂಗ್ ಫ್ಯಾನ್'ಗಳನ್ನು ಕಳ್ಳರು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಮಾರುಕಟ್ಟೆ ಈ ವರ್ಷದ ಜನವರಿ 27 ರಂದು ಅಂದು ಉಸ್ತುವಾರಿ ಸಚಿವರಾಗಿದ್ದ ಯು.ಟಿ ಖಾದರ್ ಉದ್ಘಾಟಿಸಿದ್ದರು. ಹೊಸ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ಮಂಗಳೂರು ನಗರ ನಿಗಮ (ಎಂಸಿಸಿ) ಜಂಟಿಯಾಗಿ ನಿರ್ಮಿಸಿತ್ತು. 5,400 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಕಟ್ಟಡವನ್ನು ಸುಮಾರು 12 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಮಾರುಕಟ್ಟೆಯಲ್ಲಿ ಒಟ್ಟು 122 ಅಂಗಡಿಗಳನ್ನು ನಿರ್ಮಿಸಲಾಗಿತ್ತು.
ಆದರೆ ಉದ್ಘಾಟನೆಗೊಂಡರೂ ಇದನ್ನು ಸಾರ್ವಜನಿಕ ಸೇವೆಗೆ ಮುಕ್ತಿಗೊಳಿಸಿರಲಿಲ್ಲ. ಈ ನಡುವೆ ಸುಮಾರು 15 ರಿಂದ 20 ಫ್ಯಾನ್'ಗಳು ಕಳ್ಳತನವಾಗಿದ್ದು. ಇದರೊಂದಿಗೆ ನೂತನ ಮಾರುಕಟ್ಟೆಯಲ್ಲಿ ಅಳವಡಿಸಿದ್ದ ಬೆಲೆಬಾಳುವ ವಸ್ತುಗಳು ಕಳವಾಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.