ಡಿ 24: ಭಾರತದಲ್ಲಿ ನದಿಗಳನ್ನು ಪವಿತ್ರ ನದಿ ಎಂದೇ ಕರೆಯುತ್ತಾರೆ ಹಾಗೂ ಪೂಜಿಸುತ್ತಾರೆ.ಕಾಲ ಬದಲಾದಂತೆ ಮಾನವ ಕಪಿಮುಷ್ಟಿಗೆ ಸಿಲುಕಿದ ನದಿಗಳ ಒಡಲಿನಲ್ಲಿ ಮಾಲಿನ್ಯವೇ ತುಂಬಿಕೊಳ್ಳುತ್ತಿದ್ದರೆ ಇನ್ನು ಕೆಲವು ನದಿಗಳು ಹೇಳಹೆಸರಿಲ್ಲದೆ ಮಾಯಾವಾಗಿಬಿಟ್ಟಿದೆ.ಈ ಹಿಂದೆ ದೇಶದ ಪವಿತ್ರ ನದಿ ಗಂಗೆಯಷ್ಟು ಮಲಿನ ಮತ್ತು ವಿಷಕಾರಿ ಬೇರೆಯಿಲ್ಲ ಎಂದು ಬಿಂಬಿಸಲಾಗುತ್ತಿತ್ತು . ಆದರೆ ಅಘಾತಕಾರಿಯಾದ ವಿಷಯ ಅಂದರೆ ಕರುನಾಡಿನ ಜೀವನದಿ ಕಾವೇರಿ ಅದಕ್ಕೂ ಒಂದು ಹೆಜ್ಜೆ ಮುಂದೆ ಇದೆ. ಕಾರಣ ಕಾವೇರಿ ಗಂಗಾ ನದಿಗಿಂತ ಶೇ.600ರಷ್ಟು ಅಧಿಕ ಪ್ರಮಾಣದಲ್ಲಿ ಹೆಚ್ಚಿನ ವಿಷಕಾರಿ ರಾಸಾಯನಿಕ ತ್ಯಾಜ್ಯಗಳನ್ನು ಹೊಂದಿದೆ ವರದಿಯೊಂದು ತಿಳಿಸಿದೆ. ಪ್ರತಿ ವರ್ಷ ಅದಕ್ಕೆ 8.3 ಕ್ಯೂಬಿಕ್ ಕಿಮೀ ಪ್ರಮಾಣದಲ್ಲಿ ತ್ಯಾಜ್ಯ ಸೇರಿಕೊಳ್ಳುತ್ತದೆ ಎಂದು ಅಣ್ಣಾ ವಿವಿ ನಡೆಸಿದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಪ್ರತಿ ಲೀಟರ್ಗೆ 753 ಮಿಲಿ ಗ್ರಾಂನಷ್ಟು ತ್ಯಾಜ್ಯ ಜೀವ ನದಿಗೆ ಸೇರಿಕೊಳ್ಳುತ್ತದೆ.ಅಂದರೆ ಗಂಗಾ ನದಿಗೆ ಸೇರಿಕೊಳ್ಳುವ ತ್ಯಾಜ್ಯದ ಐದು ಪಟ್ಟು ಹೆಚ್ಚು ಎನ್ನುವುದು ಗಮನಾರ್ಹ. ಜವಳಿ, ಸಿಮೆಂಟ್, ಡೈಯಿಂಗ್ ಮತ್ತು ರಾಸಾಯನಿಕ ಕಾರ್ಖಾನೆಗಳು ನದಿ ತಟದಲ್ಲೇ ಸ್ಥಾಪನೆಯಾಗಿ, ತ್ಯಾಜ್ಯಗಳನ್ನು ಅದಕ್ಕೆ ಬಿಡುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಅಧ್ಯಯದಲ್ಲಿ ಗೊತ್ತಾಗಿದೆ.