ಕುಂದಾಪುರ,ಆ 26 (Daijiworld News/RD): ಅಕ್ರಮವಾಗಿ ಮಹೀಂದ್ರಾ ಪಿಕ್ಅಪ್ ವಾಹನದಲ್ಲಿ ಕೋಣಗಳನ್ನು ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸೊತ್ತು ಸಹಿತ ವಶಕ್ಕೆ ತೆಗೆದುಕೊಂಡ ಘಟನೆ ಬೈಂದೂರಿನಲ್ಲಿ ನಡೆದಿದೆ.
ಅಕ್ರಮ ಜಾನುವಾರು ಸಾಗಾಟದಲ್ಲಿ ಬಂಧನಕ್ಕೆ ಒಳಗಾದವರನ್ನು ಭಟ್ಕಳ ತಾಲೂಕು ಸರ್ಪನಕಟ್ಟೆ, ಯಲವಾಡಿ ಕೋರ್ ನಿವಾಸಿ ನಾರಾಯಣ ನಾಯ್ಕ್ ಎಂಬಾತನ ಮಗ ಮಂಜುನಾಥ ನಾಯ್ಕ (65) ಹಾಗೂ ಬೈಂದೂರು ಬಿಜೂರು ಗ್ರಾಮದ ಬ್ಜೇರಿ ನಿವಾಸಿ ಹೆರಿಯ ಪೂಜಾರಿ ಮಗ ರತ್ನಾಕರ ಪೂಜಾರಿ (20) ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಬೊಲೇರೋ ಪಿಕ್ ಅಫ್ ವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೋಣಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಕಂಬದಕೋಣೆ ಕಡೆಯಿಂದ ಭಟ್ಕಳ ಕಡೆಗೆ ತುಂಬಿಸಿಕೊಂಡು ಹೋಗುತ್ತಿದ್ದ ಸಂದರ್ಭ ಯಡ್ತರೆ ಜಂಕ್ಷನ್ ಬಳಿ ಬೈಂದೂರು ಎಸೈ ತಿಮ್ಮೇಶ್ ಮತ್ತು ತಂಡ ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಪಿಕ್ಅಪ್ ವಾಹನದಲ್ಲಿ ಹಿಂಬದಿಯಲ್ಲಿ ಪರಿಶೀಲಿಸಿದಾಗ 2 ಕಪ್ಪು ಬಣ್ಣದ ಕೋಣಗಳನ್ನು ಯಾವುದೇ ಮೇವು, ಬಾಯಾರಿಕೆ ನೀಡದೇ, ಹಿಂಸಾತ್ಮಕ ರೀತಿಯಲ್ಲಿ ಉಸಿರುಗಟ್ಟುವ ರೀತಿಯಲ್ಲಿ ಕಟ್ಟಿಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಕೋಣಗಳ ಮೌಲ್ಯ55,000 ರೂಪಾಯಿ ಆಗಿದ್ದು ಮಹೀಂದ್ರ ಪಿಕ್ ಅಪ್ ನ ಮೌಲ್ಯ 4,00,000 ರೂಪಾಯಿ ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಂದುರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.