ಉಪ್ಪಿನಂಗಡಿ, ಆ.27(Daijiworld News/SS): ಬ್ಲಡ್ ಡೋನರ್ಸ್ ಮಂಗಳೂರು ತಂಡದ 200ನೇ ರಕ್ತದಾನ ಶಿಬಿರ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಉಪ್ಪಿನಂಗಡಿಯ ಪೃಥ್ವಿ ಕಾಂಪ್ಲೆಕ್ಸ್ ಬಳಿ ಜರುಗಿತು.
ಉಬರ್ ಡೋನರ್ಸ್ ಉಪ್ಪಿನಂಗಡಿ, ಮಂಬಾಹು ರಹ್ಮ ಚಾರಿಟೇಬಲ್ ಟ್ರಸ್ಟ್ ರಿ, ಐ ಎಮ್ ಡಬ್ಲ್ಯು ಎ ಪೆರಿಯಡ್ಕ, ಸಿಲ್ವರ್ ಸ್ಪೂನ್ ಕ್ಯಾಟರರ್ಸ್, ಎಜೆ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 200ನೇ ರಕ್ತದಾನ ಶಿಬಿರ ನಡೆದಿದೆ. ನಝೀರ್ ಅಝ್ಹರಿ ಬೋಲ್ಮಿನಾರ್ ಕಾರ್ಯಕ್ರಮವನ್ನು ದುಆದೊಂದಿಗೆ ಉದ್ಘಾಟಿಸಿ, ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ರಕ್ತದಾನ ಮಹಾದಾನವಾಗಿದ್ದು ಈ ಸೌಹಾರ್ದ ಸಮಾನ ಮನಸ್ಕ ದಾನವು ಉತ್ತಮ ಸಮಾಜ ಸೇವೆಯಾಗಿದ್ದು, ಸಮಾಜಕ್ಕೆ ಮಾದರಿ ಎಂದು ಹೇಳಿದರು.
ಇದೇ ವೇಳೆ ಉಪ್ಪಿನಂಗಡಿಯ ಡಾಕ್ಟರ್ ನಿರಂಜನ್ ರೈ ಮಾತನಾಡಿ, ಅವಶ್ಯಕ ಸಮಯದಲ್ಲಿ ರೋಗಿಗೆ ಸ್ಪಂದಿಸುವ ತಂಡಗಳಲ್ಲಿ ಸೇವೆಗೈಯುವ ಯುವಕರನ್ನು ಅಭಿನಂದಿಸಿದರು. ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರು ಬ್ಲಡ್ ಡೋನರ್ಸ್ ಮಂಗಳೂರು ರಿ. ತಂಡದ ಬಗ್ಗೆ ಮಾತನಾಡಿ, ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕೇವಲ ರಕ್ತದಾನ ಮಾತ್ರ ಅಲ್ಲದೆ ತಮ್ಮ ಕೈಲಾದ ಯಾವ ಸೇವೆಯಲ್ಲೆಲ್ಲಾ ತೊಡಗಿಸಬಹುದು ಆ ಕ್ಷೇತ್ರಗಳನ್ನು ಸಂಪೂರ್ಣವಾಗಿ ಆವರಿಸುವ ಈ ತಂಡದ ಕಾರ್ಯ ನಿಜಕ್ಕೂ ಅದ್ಭುತ ಎನ್ನುವ ಮೂಲಕ ತಂಡದ ಸದಸ್ಯರನ್ನು ಹುರಿದುಂಬಿಸಿದರು.
ಮುಸ್ತಫಾ ಕೆಂಪಿ ಮಾತನಾಡಿ, ಉಪ್ಪಿನಂಗಡಿಯ ಯುವಕರು ಮಾನವೀಯತೆಯುಳ್ಳವರು. ಈ ರೀತಿಯ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಳ್ಳುವುದು ನಿಜಕ್ಕೂ ಅಭಿನಂದನಾರ್ಹ ಎಂದು ಹೇಳಿದರು. ಶಾಕಿರ್ ಹಕ್ ನೆಲ್ಯಾಡಿ ಮಾತನಾಡಿ, ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸೇವೆಯನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ತೌಸಿಫ್ ಯು ಟಿ, ಅಶ್ರಫ್ ಐ ಮೈಸೂರು, ನಝೀರ್ ಮಠ, ಹಾರೂನ್ ಅಗ್ನಾಡಿ, ತಾಹಿರ್ ಸಾಲ್ಮರ ಮುಸ್ತಫಾ ಪಿ.ಎಚ್, ಡಾ ಗೋಪಾಲಕೃಷ್ಣ, ಬಶೀರ್ ಕೆ.ಪಿ, ಜ ಉಮರ್, ಶಬೀರ್ ಕೆಂಪಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.