ಕಾಸರಗೋಡು ಡಿ 24 : ಹಲವು ಅಚ್ಚರಿಯ ಕಲಾ ಕೆಲಸಗಳಿಗೆ ಖ್ಯಾತ ರಾಗಿರುವ ಬಂದ್ಯೋಡು ಇಚ್ಲಂಗೋಡಿನ ಪುಟ್ಟ ಎಂದು ಕರೆಯಲ್ಪಡುವ ವೆಂಕಟೇಶ ಆಚಾರ್ಯ ಎಂಬ ಯುವಕ ಈ ಬಾರಿ ಬೆಂಕಿ ಕಡ್ಡಿಯ ತುದಿಯಲ್ಲಿ ಗೋದಲಿ ನಿರ್ಮಿಸುವ ಮೂಲಕ ಅಚ್ಚರಿ ಮೂಡಿಸಿ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ವರ್ಣಮಯ ವಾದ ಗೋದಲಿ ನಿರ್ಮಿಸಿದ್ದು , ಎಲ್ಲರ ಅಚ್ಚರಿಯ ಕೇಂದ್ರ ಬಿಂದುವಾಗಿದ್ದಾರೆ. ಒಂದು ಗಂಟೆ ಅವಧಿಯಲ್ಲಿ ಅವರು ಈ ಗೋದಲಿಯನ್ನು ನಿರ್ಮಿಸಿದ್ದಾರೆ . ಈ ಹಿಂದೆ ಅವರು ಪೆನ್ಸಿಲ್ ಮೊನೆಯಲ್ಲಿ ಭಾರತದ ಭೂಪಟ , ಯೋಗ ದಿನದಂದು ಸೂರ್ಯ ನಮಸ್ಕಾರ ದೃಶ್ಯ ,ವಿಶ್ವ ಕಪ್ ಟ್ರೋಫಿ ಯನ್ನು ನಿರ್ಮಿಸಿದ್ದಾರೆ .
ಅಂಚೆ ಕಾರ್ಡ್ ವೊಂದರಲ್ಲಿ 6524 ಬಾರಿ 'ಓಂ ನಮ ಶಿವಾಯ 'ಎಂಬ ಶಿವ ಪಂಚಾಕ್ಷರಿಯನ್ನು ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ದಪ್ಪ ಕಾಗದದಲ್ಲಿ ಅರ್ಧ ಇಂಚಿನ ಕ್ಯಾಲೆಂಡರ್ ತಯಾರಿಸಿದ್ದು , ಇದರಲ್ಲಿ 12 ಪುಟಗಳಿವೆ. ಕಳೆದ ಓಣಂ ದಿನಾಚರಣೆಯಂದು ಒಂದೂವರೆ ಇಂಚಿನ ಪೂಕಳಂ ನಲ್ಲಿ ಕಥಕ್ಕಳಿ ನೃತ್ಯವನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದರು . ಸೂಚಿ ದ್ವಾರದಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸುವ ಮೂಲಕ ಅಚ್ಚರಿ ಮೂಡಿಸಿದ್ದರುಭಾರತದ 29 ರಾಜ್ಯಗಳ ಹೆಸರುಗಳ ಅಕ್ಷರಗಳನ್ನು ಜೋಡಿಸಿ ಪ್ರಧಾನಿ ನರೇಂದ್ರ ಮೋದಿಯ ಚಿತ್ರವನ್ನು ರಚಿಸಿದ್ದಾರೆ .
ಪ್ರಸ್ತುತ ಕಾಸರಗೋಡು ರೈಲು ನಿಲ್ದಾಣ ರಸ್ತೆಯ ತಾಯಲಂಗಾಡಿಯಲ್ಲಿ ಚಿನ್ನ , ಬೆಳ್ಳಿ ಕೆತ್ತನೆ ಕೆಲಸ ಮಾಡುತ್ತಿರುವ ವೆಂಕಟೇಶ ಪುಟ್ಟ ರವರಿಗೆ ಎಲ್ಲಾ ಹವ್ಯಾಸಗಳಿಗೆ ಅಂಗಡಿಯೇ ಮೀಸಲು .
ಹಳೆಯ ನಾಣ್ಯ ಮತ್ತು ನೋಟುಗಳ ಸಂಗ್ರಹ ಮತ್ತೊಂದು ಹವ್ಯಾಸ .ಪ್ರತಿ ದಿನ ಏನಾದರೊಂದು ಹೊಸತನ ಮಾಡಬೇಕೆಂಬುದು ಈ ಯುವಕನ ಬಯಕೆಯಾಗಿದೆ, ಬದುಕಿನ ಜಂಜಾಟ , ಒತ್ತಡಗಳ ನಡುವೆ ಕಲೆ , ಹವ್ಯಾಸವನ್ನು ರೂಡಿಸಿಕೊಂಡು ಬಂದಿದ್ದಾನೆ .ಶಾಲಾ ದಿನಗಳಿಂದಲೇ ಚಿತ್ರ ರಚನೆ ಎಂದರೆ ತುಂಬಾ ಇಷ್ಟ, ಬೆಳೆಯುತ್ತಿದ್ದಂತೆ ಹಲವು ತರದ ಆಸಕ್ತಿ ಹುಟ್ಟುತ್ತಲೇ ಬಂದವು. ತನ್ನ ವೃತ್ತಿಯ ನಡುವೆ ಕಲೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಬಂದಿದ್ದಾರೆ.