ಮಂಗಳೂರು, ಮೇ. 22 (DaijiworldNews/TA): ನಗರದ ಬಿಜೈ ಜಂಕ್ಷನ್ ಬಳಿ ಬೈಕ್ -ಆಟೋ ಢಿಕ್ಕಿಯಾಗಿ ಬೈಕ್ ಸವಾರನ ಸಾವಿಗೆ ಕಾರಣವಾಗಿರುವುದು ಮಾತ್ರವಲ್ಲದೆ, ಆಟೋ ಸವಾರ ಸ್ಥಳದಿಂದ ಪರಾರಿಯಾಗಿರುವುದು ಹಾಗೂ ಊರ್ಜಿತ ಲೈಸನ್ಸ್ ಇಲ್ಲದ ಚಾಲಕನಿಗೆ ಆಟೋವನ್ನು ಚಲಾಯಿಸಲು ಕೊಟ್ಟಿರುವ ಪ್ರಕರಣದಲ್ಲಿ ಆಟೋ ಚಾಲಕ ಮತ್ತು ಮಾಲಕ ಇಬ್ಬರಿಗೂ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಇನ್ನು ಪ್ರಕರಣದ ಹಿನ್ನಲೆಯನ್ನು ನೋಡೋದಾದ್ರೆ, 2023ರ ಫೆ. 21ರಂದು ಬಿಜೈ ಜಂಕ್ಷನ್ ಕಡೆಯಿಂದ ರಂಗೋಲಿ ಕ್ರಾಸ್ ಕಡೆಗೆ ಸಾಗುವ ರಸ್ತೆಯಲ್ಲಿ ರಿಕ್ಷಾ ಚಾಲಕ ಸಾಯಿರಾಮ್ ಯು-ಟರ್ನ್ ಮಾಡುವ ಭರದಲ್ಲಿ ಬಿಜೈ ಕಡೆಗೆ ಬರುತ್ತಿದ್ದ ಬೈಕ್ ಸವಾರ ಕವನ್ ಆಳ್ವಾ ಅವರ ಬೈಕ್ಗೆ ಢಿಕ್ಕಿ ಹೊಡೆದಿದ್ದರು. ಪರಿಣಾಮವಾಗಿ ಕವನ್ ಆಳ್ವಾ ಬೈಕ್ ಸಮೇತ ಎಸೆಯಲ್ಪಟ್ಟು ರಸ್ತೆ ಬದಿಯಲ್ಲಿದ್ದ ಮರಕ್ಕೆ ಗುದ್ದಿ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ರಿಕ್ಷಾ ಚಾಲಕನು ಸ್ಥಳದಿಂದ ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ಬೈಕ್ ಸವಾರ ಅನಂತರ ಮೃತಪಟ್ಟಿದ್ದರು. ತನಿಖೆ ವೇಳೆ ಚಾಲಕನ ಬಳಿ ಊರ್ಜಿತ ಚಾಲನ ಪರವಾನಗಿ ಇಲ್ಲದಿರುವುದು ತಿಳಿದು ಬಂದಿತ್ತು. ಆ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕ ಹಾಗೂ ಆರ್.ಸಿ. ಮಾಲಕನ ವಿರುದ್ಧ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಇನ್ಸ್ಪೆಕ್ಟರ್ ನಾಗರಾಜ್ ಕೆ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ 8ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್ ಪಿ.ಎ. ಸಾಕ್ಷಿ ವಿಚಾರಣೆಗಳನ್ನು ನಡೆಸಿ ವಾದ ಪ್ರತಿವಾದಗಳನ್ನು ಆಲಿಸಿದ್ದು, ಪ್ರಾಸಿಕ್ಯೂಶನ್ ಪ್ರಕರಣವನ್ನು ಸಾಬೀತು ಪಡಿಸಿದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ. ಚಾಲಕನಿಗೆ 1 ತಿಂಗಳ ಸಾದಾ ಸಜೆ ಮತ್ತು 5,000 ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ 10 ದಿನಗಳ ಸಾದಾ ಸಜೆ. ಮಾಲಕನಿಗೆ 15 ದಿನಗಳ ಸಾದಾ ಸಜೆ ಹಾಗೂ 1,000 ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ 7 ದಿನಗಳ ಸಾದಾ ಸಜೆ ವಿಧಿಸಿದ್ದಾರೆ.
ಆರ್.ಸಿ. ಮಾಲಕ ಜಗದೀಶ ಚಂದಪ್ಪ ಊರ್ಜಿತ ಲೈಸನ್ಸ್ ಇಲ್ಲದವನಿಗೆ ರಿಕ್ಷಾ ನಡೆಸಲು ಅನುಮತಿ ನೀಡಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಮೊದಲಿಗೆ ಗೀತಾ ರೈ ಸಾಕ್ಷಿ ವಿಚಾರಣೆ ನಡೆಸಿದ್ದು, ಅನಂತರ ಆರೋನ್ ಡಿ’ಸೋಜಾ ವಿಟ್ಲ ಸಾಕ್ಷಿ ವಿಚಾರಣೆ ಮುಂದುವರಿಸಿ ವಾದ ಮಂಡಿಸಿದ್ದರು.