ಮಂಗಳೂರು, ಮೇ. 22 (DaijiworldNews/TA): ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಪ್ರವರ್ತಿತ ಏಳು ಯಕ್ಷಗಾನ ಮೇಳಗಳ 189 ದಿನಗಳ ತಿರುಗಾಟ ಅಂತಿಮ ಹಂತ ತಲುಪಿದ್ದು, ಇನ್ನೂ ಕೇವಲ ಏಳು ದಿನಗಳ ಸೇವಾ ಬಯಲಾಟ ಮಾತ್ರ ಬಾಕಿಯಿದೆ. ಪತ್ತನಾಜೆಯ ಹತ್ತು ಹೆಜ್ಜೆಗಳಲ್ಲಿ ಏಳು ಹೆಜ್ಜೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಿರುವ ಯಕ್ಷಭ್ರಮರಿಯ ಈ ‘ಸಪ್ತಪದಿ’ ಯಕ್ಷಪ್ರಿಯರಲ್ಲಿ ವಿಶೇಷ ಸಂಭ್ರಮ ಮೂಡಿಸಿದೆ.

2025ರ ನವೆಂಬರ್ 17ರಂದು ಆರಂಭವಾದ ತಿರುಗಾಟವು 2026ರ ಮೇ 25ರ ಪತ್ತನಾಜೆಯವರೆಗೆ ನಡೆಯಲಿದ್ದು, ಒಟ್ಟು 1323 ಬಯಲಾಟ ಪ್ರದರ್ಶನಗಳು ದಾಖಲಾಗಲಿವೆ. ಮೇ 26ರಂದು ಕಟೀಲು ಕ್ಷೇತ್ರದಲ್ಲಿ ಏಳು ಮೇಳಗಳ ಸೇವೆಯಾಟದೊಂದಿಗೆ ಮೇಳ ಒಳಗಾಗುವ ಹಾಗೂ ಗೆಜ್ಜೆ ಬಿಚ್ಚುವ ಸಂಪ್ರದಾಯ ದೇವಿಯ ಸನ್ನಿಧಿಯಲ್ಲಿ ನೆರವೇರಲಿದೆ.
ಭಾನುವಾರಕ್ಕೆ ಏಳು ಮೇಳಗಳ ‘ಶ್ರೀ ದೇವೀ ಮಹಾತ್ಮೆ’ ಪ್ರಸಂಗಗಳ ಒಟ್ಟು ಪ್ರದರ್ಶನ ಸಂಖ್ಯೆ 700 ದಾಟಿದ್ದು, ಮೇ 18ರವರೆಗೆ 702 ಪ್ರದರ್ಶನಗಳು ನಡೆದಿವೆ. ಮೇ 25ರವರೆಗೆ ನಿಗದಿಯಾಗಿರುವ ಆಟಗಳನ್ನು ಸೇರಿಸಿದರೆ ಈ ಸಂಖ್ಯೆ 720ಕ್ಕೆ ತಲುಪಲಿದೆ.
ಮೊದಲ ಮೇಳ ಗರಿಷ್ಠ 113 ದೇವೀ ಮಹಾತ್ಮೆ ಪ್ರಸಂಗ ಪ್ರದರ್ಶನ ನೀಡಿ ಮುಂಚೂಣಿಯಲ್ಲಿದೆ. ಎರಡನೇ ಮೇಳ 108, ಐದನೇ ಮೇಳ 107 ಹಾಗೂ ಆರನೇ ಮೇಳ 105 ಪ್ರದರ್ಶನ ನೀಡಿವೆ. ಈ ಬಾರಿ ಹೊಸದಾಗಿ ಆರಂಭಗೊಂಡ ಏಳನೇ ಮೇಳವೂ 100 ದೇವೀ ಮಹಾತ್ಮೆ ಪ್ರಸಂಗಗಳನ್ನು ಪ್ರದರ್ಶಿಸಿ ಶತಕ ದಾಖಲಿಸಿದೆ.
ಈ ಬಾರಿಯ ತಿರುಗಾಟದಲ್ಲಿ ಮಾರ್ಚ್ 30 ಮತ್ತು ಏಪ್ರಿಲ್ 20ರಂದು, ಅಂದರೆ ಕಟೀಲು ಜಾತ್ರೆಯ ಹಗಲು ರಥೋತ್ಸವದ ದಿನ, ಎಲ್ಲ ಏಳು ಮೇಳಗಳೂ ‘ಶ್ರೀ ದೇವೀ ಮಹಾತ್ಮೆ’ ಪ್ರಸಂಗವನ್ನೇ ಪ್ರದರ್ಶಿಸಿರುವುದು ವಿಶೇಷ. ಇದೇ ಅವಧಿಯಲ್ಲಿ ‘ಕಟೀಲು ಕ್ಷೇತ್ರ ಮಹಾತ್ಮೆ’ ಪ್ರಸಂಗವು 79 ಪ್ರದರ್ಶನ ಕಂಡಿದೆ.
ಇತ್ತೀಚಿನ ದಿನಗಳಲ್ಲಿ ಮಳೆಯ ಆತಂಕದ ಹಿನ್ನೆಲೆಯಲ್ಲಿ ಸೇವಾ ಬಯಲಾಟಗಳು ತೆರೆಯ ಬಯಲಿಗಿಂತ ಸಭಾಂಗಣಗಳತ್ತ ಹೆಚ್ಚು ಸರಿದಿವೆ. ಕಟೀಲು ಸರಸ್ವತೀ ಸದನ, ಮಹಾಲಕ್ಷ್ಮೀ ಸದನ ಸೇರಿದಂತೆ ದೇವಳದ ಸುತ್ತಮುತ್ತಲಿನ ಸಭಾಂಗಣಗಳಲ್ಲಿ ಏಪ್ರಿಲ್ 1ರಿಂದಲೇ 100ಕ್ಕೂ ಅಧಿಕ ಯಕ್ಷಗಾನ ಪ್ರದರ್ಶನಗಳು ನಡೆದಿರುವುದು ಗಮನಾರ್ಹವಾಗಿದೆ. ಏಳು ಮೇಳಗಳ ಈ ಅಪ್ರತಿಮ ಪಯಣ, ಯಕ್ಷಗಾನ ಎಂಬ ದೈವಿಕ ಕಲೆಗೆ ದೊರೆತ ಜನಾಶೀರ್ವಾದದ ಜೀವಂತ ಉದಾಹರಣೆಯಾಗಿದೆ.