ಮಂಗಳೂರು ಡಿ 24: ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಿರುವ ಬೈಕಂಪಾಡಿಯಲ್ಲಿ ರಾತ್ರೋರಾತ್ರಿ ಎಂಟು ಅಂಗಡಿಗಳನ್ನು ಧ್ವಂಸಗೊಳಿಸುವ ಘಟನೆ ಡಿ 24 ರ ಮುಂಜಾನೆ ನಡೆದಿದೆ. ಬೈಕಂಪಾಡಿಯಲ್ಲಿರುವ ಎರಡು ಹೋಟೆಲ್ , ಒಂದು ವೈನ್ ಶಾಪ್, ಒಂದು ದಿನಸು ಮಾರಾಟ ಮಳಿಗೆ ಸೇರಿದಂತೆ ಎಂಟು ಅಂಗಡಿಗಳನ್ನು ದ್ವಂಸಗೊಳಿಸಲಾಗಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ಅಂಗಡಿಗಳನ್ನು ಧ್ವಂಸಗೊಳಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರವಾಗಲಿ, ಮಹಾನಗರಪಾಲಿಕೆಗೆಯಾಗಲಿ ಯಾವುದೇ ಮಾಹಿತಿ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಅಂಗಡಿ ದ್ವಂಸ ಕಾರ್ಯಚರಣೆ ನಡೆಸಿಲ್ಲ ಎಂದು ತಿಳಿಸಿದೆ, ಮತ್ತೊಂದೆಡೆ ಪಾಲಿಕೆ ಕೂಡಾ ಅಂಗಡಿ ತೆರವು ಕಾರ್ಯಚರಣೆ ನಡೆಸಿಲ್ಲ ಎಂದು ಹೇಳಿದೆ ಹೀಗಾಗಿ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಿದವರು ಯಾರು ಎನ್ನುವುದೇ ಸ್ಥಳೀಯರ ಗೊಂದಲಕ್ಕೆ ಕಾರಣವಾಗಿತ್ತು. ಘಟನಾ ಸ್ಥಳಕ್ಕೆ ಶಾಸಕ ಮೊದಿನ್ ಬಾವಾ ಬೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಇನ್ನು ಅಂಗಡಿಯನ್ನು ದ್ವಂಸಗೊಳಿಸುವ ವೇಳೆ ಹೋಟೆಲ್ ನ ಒಳಗೆ ಕಾರ್ಮಿಕರು ಮಲಗಿದ್ದು ಜೆಸಿಬಿ ಹಾಗೂ ಕಟ್ಟಡ ಉರುಳಿಬೀಳುವ ಸದ್ದು ಕೇಳಿ ಹೊರಗೋಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇದಲ್ಲದೆ ಜಾಗವು ತಕರಾರಿನಲ್ಲಿದ್ದು ಜಮೀನಿಗೆ ಸಂಬಂಧಪಟ್ಟವರೇ ಯಾರೋ ಅಂಗಡಿಗಳನ್ನು ದ್ವಂಸಗೊಳಿಸಿದ್ದಾರೆ ಎನ್ನುವ ಆರೋಪವು ಸದ್ಯ ಕೇಳಿಬರುತ್ತಿದೆ.