ಕುಂದಾಪುರ, ಆ 27 (DaijiworldNews/SM): ತಾಲ್ಲೂಕಿನ ಯಡಮೊಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಜು.11 ರಂದು ಬೆಳಿಗ್ಗೆ 4.30 ರ ವೇಳೆಯಲ್ಲಿ ಮನೆಯ ಸಮೀಪದಲ್ಲಿ ಇರುವ ಕುಬ್ಜಾ ನದಿಯಲ್ಲಿ 1 ವರ್ಷ 3 ತಿಂಗಳ ಹೆಣ್ಣು ಮಗು ಸಾನ್ವಿಕಾಳನ್ನು ಕೊಂದು, 5 ವರ್ಷದ ಪ್ರಾಯದ ಪುತ್ರ ಸಾತ್ವಿಕನನ್ನು ಕೊಲ್ಲಲು ಯತ್ನಿಸಿದ ಆರೋಪ ಎದುರಿಸುತ್ತಿದ್ದ ಮಕ್ಕಳಿಬ್ಬರ ತಾಯಿ ರೇಖಾ(32) ಎಂಬಾಕೆಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಮನೆಯಲ್ಲಿ ಮಲಗಿದ್ದ ವೇಳೆ ನಸುಕಿನಲ್ಲಿ ಮನೆಗೆ ಬಂದ ಅಪರಿಚಿತ ಅಪಹರಣಾಕಾರರು ಮಲಗಿದ್ದ ಮಗುವನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಮೊದಲು ರೇಖಾ ಸುಳ್ಳು ದೂರನ್ನು ನೀಡಿದ್ದಳು. ಈ ಕಾರಣಕ್ಕಾಗಿ ಪ್ರಕರಣ ಜಿಲ್ಲಾದ್ಯಾಂತ ಸಂಚಲನ ಉಂಟು ಮಾಡಿತ್ತು. ವಾಟ್ಸ್ ಆ್ಯಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಘಟನೆಯ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದರು.
ಜು.12 ರಂದು ಕಾಣೆಯಾಗಿದ್ದ ಮಗು ಸಾನ್ವಿಕಾಳ ಮೃತ ದೇಹ ಹೊಸಂಗಡಿ ಗ್ರಾಮದ ಕಾರೂರು ಎಂಬಲ್ಲಿ ಕುಬ್ಜಾ ನದಿಯಲ್ಲಿ ಪತ್ತೆಯಾಗಿತ್ತು. ಮಗುವಿನ ನಿಗೂಢ ನಾಪತ್ತೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಜಿಲ್ಲಾ ಎಸ್.ಪಿ ನಿಶಾ ಜೇಮ್ಸ್ ಹಾಗೂ ಡಿವೈಎಸ್ಪಿ ಅವರಿಗೆ ಮಗುವಿನ ತಾಯಿ ಪದೆ ಪದೆ ತನ್ನ ಹೇಳಿಕೆ ಬದಲಾಯಿಸುತ್ತಿದುದರಿಂದ ಅನುಮಾನಗೊಂಡು ಬದುಕಿ ಉಳಿದಿದ್ದ ಪುತ್ರ ಸಾತ್ವಿಕನನ್ನು ಪ್ರಶ್ನಿಸಿ ಆತನಿಂದ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿದುಕೊಂಡು ರೇಖಾ ವಿರುದ್ದ ಐಪಿಸಿ ಕಲಂ 302, 307 ಹಾಗೂ 309 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.