ವಿಟ್ಲ, ಆ 27 (DaijiworldNews/SM): ನವವಿವಾಹಿತೆಯೊಬ್ಬಳು ತನಗೆ ಗಂಡನ ಜತೆ ಇರಲು ಇಷ್ಟವಿಲ್ಲ ಎಂದು ಪತ್ರ ಬರೆದಿಟ್ಟು ನಾಪತ್ತೆಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ, ಪ್ರಸ್ತುತ ವಿಟ್ಲ ಸಮೀಪದ ಉಕ್ಕುಡ ಪಡಿಬಾಗಿಲು ಶಾಲಾ ಶಿಕ್ಷಕ ಮುತ್ತುರಾಜ್ ಮಲ್ಲಿಗೆವಾಡ ಅವರ ಪತ್ನಿ ಮಾಲಿನಿ(23) ನಾಪತ್ತೆಯಾದ ವಿವಾಹಿತೆ.
ಮುತ್ತುರಾಜ್ ಮಲ್ಲಿಗೆವಾಡ ಅವರು ಮೂರು ವರ್ಷದಿಂದ ಪಡಿಬಾಗಿಲು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಮೂರು ತಿಂಗಳ ಹಿಂದೆ ತನ್ನದೇ ಊರಿನ ಮಾಲಿನಿ ಎಂಬಾಕೆಯನ್ನು ವಿವಾಹವಾಗಿ ವಿಟ್ಲ ಸಮೀಪದ ಕಲ್ಲಕಟ್ಟ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರ ಪತಿ ಮನೆಗೆ ಬಂದಾಗ ಆಕೆ ನಾಪತ್ತೆಯಾಗಿದ್ದಳು.
ಸುತ್ತಮುತ್ತ ಹುಡುಕಾಡಿದಾಗ ಪತ್ರ ಸಿಕ್ಕಿದ್ದು, ನನಗೆ ಗಂಡನ ಜತೆ ಜೀವನ ನಡೆಸಲು ಆಗುತ್ತಿಲ್ಲ. ಆದುದರಿಂದ ಮನೆಬಿಟ್ಟು ಹೋಗುತ್ತಿದ್ದೇನೆ ಎಂದು ಬರೆಯಲಾಗಿತ್ತು. ಈ ಬಗ್ಗೆ ಮುತ್ತುರಾಜ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.