ಬೆಂಗಳೂರು ಡಿ 24: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ತಮ್ಮ ಪಕ್ಷದ ಮೊದಲ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಪಾರದರ್ಶಕ ಹಾಗೂ ಸರಳ ಆಡಳಿತ ನಡೆಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದ್ದಾರೆ. ಸದನದಲ್ಲಿ ಜನಪ್ರತಿನಿಧಿಗಳ ಕಡ್ಡಾಯ ಹಾಜರಾತಿ, ಪ್ರಜೆಗಳ ನೇರ ಸಂಪರ್ಕಕ್ಕಾಗಿ, ಸರ್ಕಾರದಿಂದ ಸರ್ಕಾರದ್ದೇ ಆದ ಟೆಲಿವಿಜನ್ ಚಾನಲ್, ಸರ್ಕಾರಿ ಅಧಿಕಾರಿಗಳ ಕಳಪೆ ಕೆಲಸಕ್ಕೆ ವೇತನದಲ್ಲಿ ಕಡಿತ , ಪ್ರತಿ ಕಾಮಗಾರಿಗಳಿಗೆ ಟೆಂಡರ್ ಕಡ್ಡಾಯ, ಟೆಂಡರ್ ಪ್ರಕ್ರಿಯೆ ಮಾಧ್ಯಮಗಳೆದುರು ನಡೆಸುವುದು, ತಿಂಗಳಿಗೊಮ್ಮೆ ಅಧಿಕಾರಿಗಳು-ಜನಪ್ರತಿನಿಧಿಗಳ ಸಭೆ, ಅಷ್ಟೇ ಅಲ್ಲ ಸರ್ಕಾರಿ ನೌಕರರಿಗೆ ಏಕರೂಪದ ಸಮವಸ್ತ್ರ-ಬ್ಯಾಡ್ಜ್, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯ ಬಯೋಮೆಟ್ರಿಕ್ ಹಾಜರಾತಿ, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಡ್ಡಾಯ ಹಾಜರಾತಿ, ಪಾರದರ್ಶಕ ವರ್ಗಾವಣೆಗೆ ಅವಕಾಶ, ಪ್ರದೇಶಗಳಿಗನುಗುಣವಾಗಿ ತೆರಿಗೆ ಸಂಗ್ರಹ, ಸರ್ಕಾರಿ ಅಧಿಕಾರಿಗಳಿಗೆ ನೀಡುವ ವೇತನ ಭತ್ಯೆ ಪಾರದರ್ಶಕ, ವೃದ್ಧಾಶ್ರಮಗಳು, ವಸತಿ ರಹಿತರ ಅಭಿವೃದ್ಧಿಗೆ ಒತ್ತು, ಅಧಿಕಾರಿ-ಜನಪ್ರತಿನಿಧಿಗಳಿಗೆ ಕಾರ್ಯಕ್ರಮ ನಿರ್ಬಂಧ, ಪಿಂಚಣಿ ಭತ್ಯೆ ಕಾಯ್ದೆ 1952ಕ್ಕೆ ತಿದ್ದುಪಡಿ.ಮುಂತಾದ ಅಂಶಗಳನ್ನು ಒಳಗೊಂಡಿದೆ. ಪಕ್ಷದ ಪ್ರಣಾಳಿಕೆ ಕುರಿತು ಸಾರ್ವಜನಿಕರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಪಕ್ಷದ ಅಂತಿಮ ಹಾಗೂ ಅಧಿಕೃತ ಪ್ರಣಾಳಿಕೆಯ ಪೂರ್ಣ ಭಾಗವನ್ನು ಬಿಡುಗಡೆಗೊಳಿಸುವುದಾಗಿ ಉಪೇಂದ್ರ ತಿಳಿಸಿದ್ದಾರೆ.