ಮಂಗಳೂರು, ಆ.28(Daijiworld News/SS): ಕಳೆದ ಕೆಲವು ದಿನಗಳಿಂದ ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ನಗರದ ಹೊರವಲಯದ ಸೋಮೇಶ್ವರ ಹಾಗೂ ಉಳ್ಳಾಲದ ಚೆಂಬುಗುಡ್ಡೆ ನಿವಾಸಿಗಳಿಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಸೋಮೇಶ್ವರದ ಉದಯಚಂದ್ರ ಎಂಬವರ ಪತ್ನಿ ಸುಮತಿ (35) ಹಾಗೂ ಚೆಂಬುಗುಡ್ಡೆ ನಿವಾಸಿ ಪ್ರಕಾಶ್ ಗಟ್ಟಿ (47) ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾದವರು.
ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸುಮತಿ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನಲೆ, ಕಳೆದ ವಾರ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಜಾಂಡೀಸ್ ಇರುವ ಕುರಿತು ತಿಳಿದುಬಂದಿತ್ತು. ಬಳಿಕ ಆರೋಗ್ಯ ಸ್ಥಿತಿಯಲ್ಲಿ ಬಹಳಷ್ಟು ಏರುಪೇರಾಗಿದ್ದು, ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಪ್ಲೇಟ್'ಲೆಟ್'ನಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬಂದಿರುವುದರಿಂದ ಡೆಂಗ್ಯೂಗೆ ಬಲಿಯಾಗಿರುವ ಸಾಧ್ಯತೆಗಳಿವೆ. ಸುಮತಿ ಅವರ ಪತಿ ರಿಕ್ಷಾ ಚಾಲಕರಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಪ್ರಕಾಶ್ ಗಟ್ಟಿ ಟೆಂಪೋ ಚಾಲಕನಾಗಿ ದುಡಿಯುತ್ತಿದ್ದರು. ಜ್ವರ ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಪ್ಲೇಟ್'ಲೆಟ್'ನಲ್ಲಿ ವ್ಯತ್ಯಾಸವಾಗದೆ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿರುವ ಇವರು ಕುಟುಂಬದ ಆಧಾರಸ್ತಂಭವಾಗಿದ್ದರು.