ಮಂಗಳೂರು, ಆ.28(Daijiworld News/SS): ಕಳೆದ ಕೆಲ ತಿಂಗಳುಗಳ ಹಿಂದೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಆರಂಭಿಸಿರುವ 'ನೋ ಹಾರ್ನ್ ವೆಡ್ನೆಸ್ ಡೇ' ಅಭಿಯಾನಕ್ಕೆ ನಗರದಲ್ಲಿ ಪೂರಕ ಸ್ಪಂದನೆ ದೊರಕಿದೆ. ಈಗಾಗಲೇ ನಗರದಲ್ಲಿ ಸಂಚರಿಸುವ ವಾಹನಗಳಲ್ಲಿ 'ನೋ ಹಾರ್ನ್ ಸ್ಟಿಕ್ಕರ್' ಅಳವಡಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಈ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಈ ಕುರಿತು ದಾಯ್ಜಿವರ್ಲ್ಡ್ ವಾಹಿನಿಯೊಂದಿಗೆ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್, ಕಳೆದ ಕೆಲ ತಿಂಗಳ ಹಿಂದೆ ಈ ಅಭಿಯಾನ ಮಂಗಳೂರಿನಲ್ಲಿ ಪ್ರಾರಂಭಿಸುವಾಗ ಸಾರ್ವಜನಿಕ ವಲಯದಲ್ಲಿ ಪೂರಕ ವಾತಾವರಣ ನಿರ್ಮಾಣವಾಗಿತ್ತು. ಈಗಾಗಲೇ ಕಾಲೇಜು ಕ್ಯಾಂಪಸ್, ಬಸ್ ನಿಲ್ದಾಣಗಳಲ್ಲಿ, ಆಟೋ - ಟಾಕ್ಸಿ ನಿಲ್ದಾಣಗಳಲ್ಲಿ ನೋ ಹಾರ್ನ್ ಡೇ ಅಭಿಯಾನದ ಅಂಗವಾಗಿ ನಮ್ಮ ತಂಡ ಸ್ಟಿಕ್ಕರ್ ವಿತರಿಸಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದೆ. ವಿಶೇಷವಾಗಿ, ಈ ಅಭಿಯಾನದೊಂದಿಗೆ ಬಸ್ ಮಾಲಕರ ಸಂಘವೂ ಕೂಡ ನಮ್ಮೊಂದಿಗೆ ಕೈ ಜೋಡಿಸಿದೆ. ಈ ಅಭಿಯಾನದ ಉದ್ದೇಶ ನಗರದಲ್ಲಿರುವ ಅನೇಕ ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳ ಮೇಲೆ ಪ್ರಭಾವ ಬೀರುವ ಕರ್ಕಶ ಧ್ವನಿಯನ್ನು ನಿಯಂತ್ರಿಸುವುದಲ್ಲದೆ ಶಬ್ದ ಮಾಲಿನ್ಯವನ್ನು ತಡೆಗಟ್ಟುವುದಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಶಾಸಕರು, ಸಾರ್ವಜನಿಕರಲ್ಲಿ ಹಾರ್ನ್ ಮುಕ್ತ ಮಂಗಳೂರಿಗಾಗಿ ನಾವು ನಿಮ್ಮ ಸಹಕಾರ ಮತ್ತು ಬೆಂಬಲವನ್ನು ಬಯಸುತ್ತೇವೆ ಎಂದು ಮನವಿ ಕೂಡ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆಯ ಮಾದರಿಯಲ್ಲೇ ಆರಂಭವಾಗಿರುವ ನೋ ಹಾರ್ನ್ ವೆಡ್ನೆಸ್ಡೇ ಅಭಿಯಾನವು ಶಬ್ದರಹಿತ ಕುಡ್ಲವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಇಟ್ಟುಕೊಂಡಿದೆ.