ಕೋಟೇಶ್ವರ , ಆ 28 (Daijiworld News/MSP): ಪುರಾಣ ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೀರ್ತಿಯ ಮುಕುಟಕ್ಕೆ ನವಮಣಿಯ ಸೇರ್ಪಡೆಯಾಗುತ್ತಿದೆ. 65 ವರ್ಷಗಳ ನಂತರ ಕೋಟೇಶ್ವರದ ಕೊಡಿಮರ ಬದಲಾವಣೆಯಾಗುತ್ತಿದ್ದು, ನೂತನ ಬೃಹತ್ ಕೊಡಿಮರ ಆ.28ರಂದು ಕೋಟೇಶ್ವರಕ್ಕೆ ಬಂದಿದೆ. ಸುಮಾರು ೯೭ ಅಡಿ ಉದ್ದವಿರುವ ಕಿರಲು ಬೋಗಿ ಮರ 6.45 ಸುತ್ತಳತೆ ಹೊಂದಿದೆ. ಬೃಹತ್ ಟ್ರಾಲಿಯ ಮೂಲಕ ಮರವನ್ನು ಮೂರು ದಿನಗಳಿಂದ ಸುಳ್ಯದಿಂದ ತರುವ ಕಾರ್ಯ ನಡೆಯುತ್ತಿದ್ದು ಬುಧವಾರ ಬೆಳಿಗ್ಗೆ ತೆಕ್ಕಟ್ಟೆಯಿಂದ ವೈಭವದ ಪುರ ಮೆರವಣಿಗೆಯಿಂದ ಕೋಟಿಲಿಂಗೇಶ್ವನಿಗೆ ಸಮರ್ಪಣೆಯಾಗಿದೆ.
ಈಗ ಕೋಟೇಶ್ವರದಲ್ಲಿರುವ ಕೊಡಿಮರಕ್ಕೆ ಸರಿ ಸುಮಾರು 65 ವರ್ಷ ಆಗಿದೆ. ಆಗ ಕೊಲ್ಲೂರು ಕಾಡಿನಿಂದ ಈ ಮರವನ್ನು ತರಲಾಗಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಆ ಕೊಡಿಮರ ಶಿಥಿಲಗೊಂಡಿತು. ಶಿಥಿಲವಾದ ಧ್ವಜಸ್ತಂಭ ಧ್ವಜಪುರಕ್ಕೆ ಕಳಂಕಪ್ರಾಯ ಎನ್ನುವುದನ್ನು ಮನಗಂಡ ದೇಗುಲ ಹೊಸ ಕೊಡಮರದ ನಿರ್ಮಾಣದ ಬಗ್ಗೆ ಯೋಜನೆಯ ರೂಪುರೇಷೆ ತಯಾರಿಸಿತು. ಆಗ ಕಾಡಿದ ದೊಡ್ಡ ಸಮಸ್ಯೆ 97 ಅಡಿ ಉದ್ದವಿರುವ, ನೇರವಾಗಿರುವ, ಬಲಿತ ಕೊಡಿಮರಕ್ಕೆ ಸೂಕ್ತ ಸುತ್ತಳತೆ ಇರುವ ಮರವನ್ನು ಹೇಗೆ ಶೋಧಿಸುವುದು ಎನ್ನುವುದು. ಈ ಸವಾಲನ್ನು ಸಮರ್ಥವಾಗಿ ಸ್ವೀಕರಿಸಿದ ದೇವಸ್ಥಾನದ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಅಧಕ್ಷ ಕೋಣಿ ಕೃಷ್ಣದೇವ ಕಾರಂತರ ನೇತೃತ್ವದ ತಂಡ ಶಿಲ್ಪಿ ರಾಜಗೋಪಾಲ ಆಚಾರ್ಯರ ಸಹಕಾರದೊಂದಿಗೆ ಮರದ ಹುಡುಕಾಟ ನಡೆಸಿತು. ಕೊನೆಗೂ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕದ ಬೊಳ್ಳೂರುವಿನ ಕಾಡಿನಲ್ಲಿ ಕೊಡಿಮರಕ್ಕೆ ಸೂಕ್ತವಾದ ಮರ ಇರುವುದನ್ನು ಪತ್ತೆ ಹಚ್ಚಲಾಯಿತು. ಆದರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಮರವನ್ನು ಕಡಿದು ತರುವುದು ಕೂಡಾ ಸುಲಭದ ಮಾತಾಗಿರಲಿಲ್ಲ. ದ.ಕ ಜಿಲ್ಲಾಧಿಕಾರಿಯವರ ಮೂಲಕ, ಅರಣ್ಯ ಸಚಿವರು, ಇಲಾಖೆಯ ಉನ್ನತ ಅಧಿಕಾರಿಗಳ ಮನವೊಲಿಸಿ, ಗುರುತಿಸಿದ ಮರವನ್ನು ಕಡಿಯಲು ಅನುಮತಿ ಪಡೆದುಕೊಳ್ಳಲಾಯಿತು.
ಆ.25 ರ ಸಂಜೆ ಮರ ಕಡಿಯುವ ಪೂರ್ವದ ಧಾರ್ಮಿಕ ವಿಧಿವಿಧಾನಗಳನ್ನು ಆರಂಬಿಸಿಲಾಯಿತು. ವನದುರ್ಗಾ ಹೋಮ ನೆರವೇರಿಸಲಾಯಿತು. ಆ.26ರ ಮುಂಜಾನೆ ಮರ ಕಡಿಯಲಾಯಿತು. ಆ.26ರಂದು ಸಂಜೆ ಮರವನ್ನು ಟ್ರಾಲಿಗೆ ಎರಡು ಕ್ರೇನ್ ಬಳಸಿ ತುಂಬಿಸಿ, ಎರಡು ದಿನಗಳ ಸಾಗಾಟದ ಮೂಲಕ ಬುಧವಾರ ಕೊಡಿಮರ ಕೋಟೇಶ್ವರ ತಲುಪಿತು.
ತೆಕ್ಕಟ್ಟೆಯಿಂದ ಭವ್ಯ ಸ್ವಾಗತ, ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಅಧಕ್ಷ ಕೋಣಿ ಕೃಷ್ಣದೇವ ಕಾರಂತ, ದೇವಳದ ತಂತ್ರಿ ಪ್ರಸನ್ನ ಕುಮಾರ್ ಐತಾಳ, ಧಾರ್ಮಿಕ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಶಿಲ್ಪಿ ರಾಜಗೋಪಾಲ ಆಚಾರ್ಯ, ಗ್ರಾ.ಪಂ.ಅಧ್ಯಕ್ಷೆ ಶೋಭಾ, ಜಿ.ಪಂ.ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ತಾ.ಪಂ., ಗ್ರಾ.ಪಂ.ಸದಸ್ಯರು, ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ದಾರ ಸಮಿತಿ ಸದಸ್ಯರು, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಕ್ಷೇತ್ರಕ್ಕೆ ತಂದಿರುವ ಮರವನ್ನು ನೀರು ಹಾಗೂ ಎಣ್ಣೆಯಲ್ಲಿ ಮುಳುಗಿಸಿ ವಿವಿಧ ಸಂಸ್ಕಾರಗಳನ್ನು ನೆರವೇರಿಸುವ ಕಾರ್ಯ ನಡೆಯಬೇಕಿದೆ.