ಮೂಡುಬಿದಿರೆ,ಆ 28 (DaijiworldNews/SM): ರಾಜ್ಯದಲ್ಲಿ ನೆರೆಯಿಂದ ಸಂತ್ರಸ್ತರಾದವರಿಗೆ ಆಳ್ವಾಸ್ ಸಂಸ್ಥೆ ನೆರವಿನ ಹಸ್ತ ಚಾಚಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ದೊಡ್ಡ ಮೊತ್ತದ ಸಹಕಾರ ನೀಡಿದೆ. ಆಳ್ವಾಸ್ ಸಂಸ್ಥೆ, ಶಿಕ್ಷಕರು, ವಿದ್ಯಾರ್ಥಿಗಳು ಸೇರಿಕೊಂಡು ದೊಡ್ಡ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ನೆರೆ ಸಂತ್ರಸ್ತರಿಗೆ ನೀಡಲು ನಿರ್ಧರಿಸಿದೆ.
ನವೆಂಬರ ತಿಂಗಳಲ್ಲಿ ನಡೆಯಬೇಕಾಗಿದ್ದ ಮೂಡಬಿದಿರೆ ಆಳ್ವಾಸ್ ನುಡಿಸಿ ವಿರಾಸತ್ ಕಾರ್ಯಕ್ರಮವನ್ನು ಮುಂದೂಡುವ ಮೂಲಕ ಹೃದಯಸ್ಪರ್ಶಿ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ, ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಯಿಂದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದು, ಸಾವಿರಾರು ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ತಮ್ಮ ಬಂಧುಗಳನ್ನು, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಅವರ ಜೊತೆ ನಾವು ನಿಲ್ಲಬೇಕಾಗಿದೆ. ನೆರೆ ಸಂತ್ರಸ್ತರು ನೋವಿನಲ್ಲಿರುವಾಗ ನಾವು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಕಳೆದ 25 ವರ್ಷಗಳಿಂದ 'ಆಳ್ವಾಸ್ ವಿರಾಸತ್ ' ಮತ್ತು 15 ವರ್ಷಗಳಿಂದ 'ಆಳ್ವಾಸ್ ನುಡಿಸಿರಿ' ಎನ್ನುವ ಎರಡು ಬೃಹತ್ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯು ನಿರಂತರವಾಗಿ ಸಂಘಟಿಸಿಕೊಂಡು ಬಂದಿದೆ. ಈ ವರ್ಷ ಈ ಎರಡೂ ಬೃಹತ್ ಕಾರ್ಯಕ್ರಮಗಳನ್ನು ಒಂದು ಗೂಡಿಸಿ 'ಆಳ್ವಾಸ್ ನುಡಿಸಿರಿ ವಿರಾಸತ್-2019' ಎಂದು ನವೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸದ್ದೆವು. ನಮ್ಮ ಜನ ದು:ಖದಲ್ಲಿ ಮುಳುಗಿರುವಾಗ ಉತ್ಸವಗಳ ಮೂಲಕ ನಾವು ಸಂಭ್ರಮಿಸದೆ ಅವರ ಕಷ್ಟಗಳಲ್ಲಿ ಭಾಗಿಯಾಗಬೇಕೆಂದು ಯೋಚಿಸಿ ನವೆಂಬರ್ ತಿಂಗಳಲ್ಲಿ ನಡೆಯ ಬೇಕಾಗಿರುವ ಈ ಸಮ್ಮೇಳನವನ್ನು ಮುಂದೂಡಲು ತೀರ್ಮಾನಿಸಿದ್ದೇವೆ. ಈಗ ಆಗಬೇಕಾದ ಅತಿ ಸಂತಸದ ಕೆಲಸವೆಂದರೆ ನೊಂದವರಿಗೆ ಸಹಾಯ ಹಸ್ತ ಚಾಚುವುದು ಎಂದು ನಾವು ನಿರ್ಧರಿಸಿದ್ದೇವೆ ಎಂದರು.
ಇನ್ನು ಸಮ್ಮೇಳನ ಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಮುಂದೆ ಸೂಚಿಸಲಾಗುವುದು. ಕನ್ನಡ ನಾಡಿನ ಬಂಧುಗಳು ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಬೇಕೆಂದು ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.