ತೊಕ್ಕೊಟ್ಟು, ಆ 25 (DaijiworldNews/SM): ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಿಂದ ಕಾಸರಗೋಡು ತನಕದ ಹೆದ್ದಾರಿ ಬೃಹತ್ ಹೊಂಡ ಗುಂಡಿಗಳಿಂದ ತುಂಬಿಕೊಂಡಿದೆ. ಹೆದ್ದಾರಿ ಸಂಚಾರ ದುಸ್ಥರಗೊಂಡಿದೆ. ಹೆದ್ದಾರಿ ದುರಸ್ಥಿಗೊಳಿಸುವಂತೆ ವಿವಿಧ ಸಂಘಟನೆಗಳು ನಿರಂತರ ಹೋರಾಟ ನಡೆಸಿದ್ದವು. ಇದೀಗ ಅದಕ್ಕೆ ತಾತ್ಕಾಲಿಕ ಫಲ ಸಿಕ್ಕಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ತಾತ್ಕಾಲಿಕ ದುರಸ್ಥಿ ಕಾರ್ಯ ಪ್ರಾರಂಭಗೊಂಡಿದೆ. ಕಾಸರಗೋಡು ಜಿಲ್ಲಾ ಪಂಚಾಯಿತ್ ನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಠರಾವು ಹದಗೆಟ್ಟ ರಸ್ತೆಯ ಬಗ್ಗೆ ವಿಷಯ ಮಂಡಿಸಿ ಅಧಿಕೃತರ ಗಮನ ಸೆಳೆದಿದ್ದರು. ಪ್ರಸ್ತುತ ಹೆದ್ದಾರಿಯ ಕಾಮಗಾರಿಗೆ ಹಣ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ತಲಪಾಡಿಯಿಂದ ಉಪ್ಪಳದ ತನಕ ಸುಮಾರು 11 ಕಿ.ಮೀ. ರಸ್ತೆಗೆ 6.35 ಕೋ.ರೂ. ಮಂಜೂರಾಗಿದೆ. ಮಳೆಗಾಲ ಕಳೆದ ಬಳಿಕವಷ್ಟೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿದ್ದು ವಾಹನ ಸಂಚಾರ ಮೊಟಕುಗೊಳ್ಳುವ ಭೀತಿಯಿತ್ತು. ಇದೀಗ ತೀವ್ರ ಹೋರಾಟಗಳ ನಡುವೆ ಬುಧವಾರ ತಲಪಾಡಿ, ಮಂಜೇಶ್ವರ , ಕುಂಬಳೆಯಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಪ್ರಾರಂಭಗೊಂಡಿದೆ.