ಮಂಗಳೂರು, ಆ.29(Daijiworld News/SS): ಕರ್ನಾಟಕ ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಸಭೆ ಕೊಡಿಯಾಲ್ ಬೈಲ್ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆದಿದೆ. ಜಿಲ್ಲಾ ಬಿಜೆಪಿ ಘಟಕದಿಂದ ನಡೆದ ಈ ಅಭಿನಂದನಾ ಸಭೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನನಗೆ ಎಷ್ಟೇ ಎತ್ತರದ ಸ್ಥಾನ ಸಿಕ್ಕಿದ್ದರೂ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಪಾಲಿಗೆ ಕೇವಲ ಸಂಘದ ಸ್ವಯಂ ಸೇವಕನಾಗಿ, ಕಾರ್ಯಕರ್ತನಾಗಿಯೇ ಇರುತ್ತೇನೆ. ನಾನು ವಿದ್ವಾಂಸನಲ್ಲ, ನಾನು ಪಂಡಿತನಲ್ಲ, ನಾನು ಬರೀ ಸಂಘದ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ನನಗೆ ಪಕ್ಷ ಉನ್ನತ ಸ್ಥಾನ ನೀಡಿದೆ. ನಾನು ಅದನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಋಣ ನನಗಿದೆ. ನನ್ನನ್ನು ಮೂರು ಬಾರಿ ಅಭೂತಪೂರ್ವ ರೀತಿಯಲ್ಲಿ ಮತಗಳನ್ನು ನೀಡಿ ಗೆಲ್ಲಿಸಿದ ನಿಮ್ಮ ಪ್ರೀತಿಯನ್ನು ನಾನೆಂದೂ ಮರೆಯುವುದಿಲ್ಲ. ಈ ಜಿಲ್ಲೆಯ ಅಭಿವೃದ್ಧಿಗೆ ನಾನು ಮುಂದೆಯೂ ಶ್ರಮಿಸುತ್ತೇನೆ. ರಾಜ್ಯದಲ್ಲಿನ ಜಿಲ್ಲೆಯ ಅಭಿವೃದ್ಧಿಗೆ ಮತ್ತು ಪಕ್ಷ ಸಂಘಟನೆಗಾಗಿ ದುಡಿಯುತ್ತೇನೆ ಎಂದು ಹೇಳಿದರು.
ಈ ಜವಾಬ್ದಾರಿಯನ್ನು ನಾನು ನಿಷ್ಠೆಯಿಂದ ನಿರ್ವಹಿಸುತ್ತೇನೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆರವಿನಿಂದ ನಾನು ಕೆಲಸ ಮಾಡುತ್ತೇನೆ. ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುತ್ತೇನೆ. ಜಿಲ್ಲೆಯ ಹೆಸರನ್ನು ರಾಜ್ಯದೆತ್ತರಕ್ಕೆ ಕೊಂಡೊಯ್ಯುವ ಮೂಲಕ ಕೀರ್ತಿಯನ್ನು ಹೆಚ್ಚಿಸುತ್ತೇನೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ರಾಜ್ಯದ ಅತ್ಯಂತ ಜವಾಬ್ದಾರಿಯುತವಾದ ಸ್ಥಾನವನ್ನು ನಮ್ಮ ಜಿಲ್ಲೆಯ ಸಂಸದರಿಗೆ ಕೊಟ್ಟಿದ್ದಾರೆ. ಈ ಹಿಂದೆ ಪಕ್ಷವು ನಳಿನ್ ಅವರಿಗೆ ಯಾವುದೇ ಸ್ಥಾನವನ್ನು ನೀಡಿದಾಗಲೂ, ಅವರು ಅದನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಿದ್ದಾರೆ. ಮುಂದೆಯೂ ಅದನ್ನು ನಳಿನ್ ನಿರ್ವಹಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಕಾಲ ಕೂಡಿ ಬಂದಾಗ ದೇಶದ ಒಳಿತಿಗಾಗಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮಾರ್ಥ್ಯ ಪಕ್ಷಕ್ಕಿದೆ ಎಂಬುವುದನ್ನು ಬಿಜೆಪಿ ತೋರಿಸಿಕೊಟ್ಟಿದೆ. ನಳಿನ್ ಅವರ ನಾಯಕತ್ವದಲ್ಲಿ ರಾಜ್ಯದ ಅಭಿವೃದ್ದಿಯಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಮಾತನಾಡಿ, ನಳಿನ್ ಅವರು ಕಳೆದ 5 ವರ್ಷದಲ್ಲಿ ಉತ್ತಮ ಕೆಲಸವನ್ನು ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳಿಗೆ ಅನುದಾನವನ್ನು ತರುವಲ್ಲಿ ನಳಿನ್ ಅವರ ಶ್ರಮವಿದೆ. ನಳಿನ್ ಅವರು ಮಾಡಿದ ಅಭಿವೃದ್ಧಿಯ ಕೆಲಸಗಳನ್ನು ಗಮನಿಸಿಯೇ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಪಕ್ಷವನ್ನು ಮುನ್ನಡೆಸುವ ಕೆಲಸವನ್ನು ಮಾಡಲು ಅವರಿಗೆ ದೇವರು ಶಕ್ತಿ ಕೊಡಲಿ ಎಂದು ಹಾರೈಸಿದರು.
ಇದೇ ವೇಳೆ ಮಾತನಾಡಿದ ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ, ಭಾರತೀಯ ಜನತಾ ಪಾರ್ಟಿ ಒಂದು ವಿಭಿನ್ನವಾದ ಪಕ್ಷ. ಈ ಪಕ್ಷದ ಕಾರ್ಯಕರ್ತರ ಮನಸ್ಸು, ಭಾವನೆಗಳು ಒಂದೇ ಆಗಿರಬೇಕು. ಹಾಗಿದ್ದರೆ ಮಾತ್ರ ಪಕ್ಷ ಒಳ್ಳೆಯ ರೀತಿಯಲ್ಲಿ ಮುನ್ನಡೆಯಲು ಸಾಧ್ಯ. ಈ ಮೂಲಕ ನಾವು ನಳಿನ್ ಅವರಿಗೆ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಯಾ. ಗಣೇಶ್ ಕಾರ್ಣಿಕ್, ದೇಶದ ಬೆಳವಣಿಗೆಗೆ ಪೂರಕವಾಗುವ ನಿರ್ಧಾರವನ್ನು ತೆಗೆದುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅತ್ಯಂತ ಜವಾಬ್ದಾರಿಯುತವಾದ ಹುದ್ದೆಯನ್ನು ಸರ್ಕಾರ ನಳಿನ್ ಅವರಿಗೆ ನೀಡಿದೆ. ಮುಂದಿನ ದಿನಗಳಲ್ಲಿ ನಳಿನ್ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವು ಅತ್ಯಂತ ಬಲವಾಗಿ, ಭದ್ರವಾಗಿ ಬೇರೂರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಬಂದರು ಮತ್ತು ಮೀನುಗಾರಿಕೆಯ ನೂತನ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸಂಘಟನೆಯ ಸಾಮಾನ್ಯ ಪ್ರಚಾರಕರೊಬ್ಬರು ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದು ದಿಟಕ್ಕೂ ಹೆಮ್ಮೆಯ ಸಂಗತಿ. ನಾನು ನಳಿನ್ ಅವರನ್ನು ಕೆಲಸದ ಮೇಲೆ ಅವರಿಟ್ಟಿರುವ ಶೃದ್ಧೆಗಾಗಿ ಅಭಿನಂದಿಸುತ್ತೇನೆ. ನಮ್ಮ ಹಿರಿಯರು ಹಾಕಿಕೊಟ್ಟಿರುವ ಆದರ್ಶಗಳಿಗೆ ಹೊಂದಿಕೊಂಡು ನಳಿನ್ ಅವರಿಗೆ ಕೆಲಸ ಮಾಡಲು ಶಕ್ತಿ ಸಿಗಲಿ. ರಾಜ್ಯದಲ್ಲಿ ಮಹತ್ವದ ಹೆಜ್ಜೆಯನ್ನು ಇಡುವಂತಾಗಲಿ ಎಂದು ಹಾರೈಸಿದರು.