ಬಂಟ್ವಾಳ, ಆ 29 (DaijiworldNews/SM): ಬಿ.ಸಿ.ರೋಡ್ ನಿವಾಸಿ, ಲೇಖಕ ಪ. ರಾಮ ಶಾಸ್ತ್ರಿ(89) ಅವರು ಆಗಸ್ಟ್ 29ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರ ಇಚ್ಛೆಯಂತೆ ಕೆಎಂಸಿ ಆಸ್ಪತ್ರೆಗೆ ದೇಹದಾನ ಮಾಡಲಾಗಿದೆ.
ಇವರು ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ಅವರ ಹಿರಿಯ ಸಹೋದರರಾಗಿದ್ದಾರೆ.ಪರಮಾನಂದ ಎಂಬ ಕಾವ್ಯನಾಮದಲ್ಲಿ ಸಾಹಿತ್ಯ ಲೋಕದಲ್ಲಿ ಆಪ್ತವಾದ ಬರಹಗಳನ್ನು ಪ್ರಕಟಿಸಿದ್ದರು. ಒಂದು ಕಾಲದಲ್ಲಿ ಶ್ರೇಷ್ಠ ಕತೆಗಾರರಾಗಿದ್ದರು. 1950-60ರ ದಶಕದಲ್ಲಿ ಹೃದಯಸ್ಪರ್ಶಿಯಾದ ಸಾಂಸಾರಿಕ ಕತೆಗಳ ಮೂಲಕ ಓದುಗರ ಹಾಗೂ ವಿಮರ್ಶಕರ ಮನ ಗೆದ್ದಿದ್ದರು. ಬಳಿಕ ಸಾಹಿತ್ಯ ಕ್ಷೇತ್ರದಿಂದ ರಾಮ ಶಾಸ್ತ್ರಿಯವರು ದೂರ ಸರಿದಿದ್ದರು.
ಈ ಎರಡು ವರ್ಷದಲ್ಲಿ ಅಜ್ಜನೆಂಬ ಅರಳಿ ಮರ, ಪರಮಾನಂದರ ಕಥಾಸಂಗಮ, ಮಾಂತ್ರಿಕಶಕ್ತಿ ಎಂಬ ಪುಸ್ತಕಗಳು ಪ್ರಕಟವಾದವು. ಪಟಿಕ್ಕಲ್ಲು ರಾಮಶಾಸ್ತ್ರಿ ಅವರು ಬಂಟ್ವಾಳ ತಾಲೂಕಿನ ಪುಣಚದ ಬಳಿಯಲ್ಲಿ 1931ರ ಜ.30ರಂದು ಜನಿಸಿದರು. ಅವರು ಎಳೆಯ ವಯಸ್ಸಿನಲ್ಲೇ ತಾಯಿಯನ್ನು, ಮನೆಯ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಪುತ್ತೂರಿನ ಬಳಿಯ ಪೋಳ್ಯದಲ್ಲಿ ತನ್ನ ಜೀವನ ಆರಂಬಿಸಿದರು.
ಚಿಕ್ಕ ವಯಸ್ಸಿನಲ್ಲೇ ಖ್ಯಾತ ಕತೆಗಾರ, ಕವಿ ದಿ. ಯರ್ಮುಂಜ ರಾಮಚಂದ್ರರ ಒಡನಾಡಿಯಾದರು. ಬೆಂಗಳೂರಿನ ಕತೆಗಾರ ಮಾಸಪತ್ರಿಕೆಯಲ್ಲಿ ಪರಮಾನಂದ ಕಾವ್ಯನಾಮದಡಿಯಲ್ಲಿ ಬರೆದ ಹತ್ತಾರು ಕತೆಗಳು ನಿರಂತರವಾಗಿ ಪ್ರಕಟವಾದವು.
ದಿನಪತ್ರಿಗಳು, ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಇವರು ನಿರಂತರ ಲೇಖನಗಳನ್ನು ಪ್ರಕಟಿಸಿ ಓದುಗರ ಮನ ಗೆದ್ದಿದ್ದರು.