ಚಿಕ್ಕಮಗಳೂರು ಡಿ 25 : ತನ್ನ ಕೆಲಸದ ಕಾರ್ಯ ವೈಖರಿಯಿಂದ ಜನಮೆಚ್ಚಿಗೆ ಗಳಿಸಿದ ಎಸ್ಪಿ ಅಣ್ಣಾಮಲೈ ಮತ್ತೆ ಜನರ ಕಣ್ಣಿಗೆ ಹೀರೋ ಆಗಿದ್ದಾರೆ. ಖಡಕ್ ಮಾತು, ಬಿರುಸಿನ ಕೆಲಸ, ಜನರ ಬಗ್ಗೆ ಕಾಳಜಿಯಿಂದಯಿಂದಲೇ ಫೇಮಸ್ ಆಗಿದ್ದ ಅಣ್ಣಾಮಲೈ ಇದೀಗ ಸ್ಪ್ಯಾನರ್ ಹಿಡಿದು ಕಾರು ರಿಪೇರಿಗೆ ಮುಂದಾಗಿದ್ದಾರೆ.
ಹೌದು, ಸಾಮಾನ್ಯವಾಗಿ ಅಪಘಾತ, ಮಾರ್ಗಮಧ್ಯೆ ವಾಹನ ಕೆಟ್ಟು ನಿಂತಾಗ ಸಹಾಯ ಮಾಡುವರೇ ಕಡಿಮೆ. ಅಂತಹದರಲ್ಲಿ, ಬೆಂಗಳೂರಿನ ಪ್ರವಾಸಿಗರ ಕಾರೊಂದು ಪಂಕ್ಚರ್ ಆಗಿ ನಿಂತಿದ್ದ ವೇಳೆ ಸ್ವತಃ ಎಸ್ಪಿ ಅಣ್ಣಾಮಲೈ ಕೈಯಲ್ಲಿ ಸ್ಪ್ಯಾನರ್ ಹಿಡಿದು ಟೈರ್ ಬಿಚ್ಚುವ ಪ್ರಯತ್ನ ನಡೆಸಿದರು. ನಿನ್ನೆ ರಾತ್ರಿ ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಕಾರೊಂದು ಮತ್ತಾವರ ಗ್ರಾಮದ ಬಳಿ ಪಂಕ್ಚರ್ ಆಗಿ ನಿಂತಿತ್ತು. ರಸ್ತೆಯ ಸುತ್ತಮುತ್ತಲೆಲ್ಲಾ ಮರಗಳು , ಕಾಡಿನಂತೆ ಇದ್ದದ್ದರಿಂದ ಪ್ರವಾಸಿಗರು ಆತಂಕದಲ್ಲಿದ್ದರು. ಈ ವೇಳೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ಅಣ್ಣಾಮಲೈ ಸ್ವತಃ ತಾವೇ ಕೈಯಲ್ಲಿ ಸ್ಪ್ಯಾನರ್ ಹಿಡಿದು ಟೈರ್ ಬಿಚ್ಚಲು ಯತ್ನಿಸಿದ್ದಾರೆ. ಆದ್ರೆ ಶತ ಪ್ರಯತ್ನ ಮಾಡಿದರೂ ಟೈರ್ ಬಿಚ್ಚಲಾಗಲೇ ಇಲ್ಲ. ಕೊನೆಗೆ ಸಿಬ್ಬಂದಿಗೆ ಕಾಲ್ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿ, ಕಾರಿನಲ್ಲಿದ್ದವರನ್ನು ತಮ್ಮದೇ ಕಾರಿನಲ್ಲಿ ನಗರಕ್ಕೆ ಕರೆತಂದು ಬಿಟ್ಟು ಎಲ್ಲರಿರಿಂದಲೂ ಪ್ರಶಂಸೆಗೆ ಪಾತ್ರರಾದರು. ತೊಂದರೆಗೊಳಗಾದ ಕಾರಿನಲ್ಲಿದ್ದ ಕುಟುಂಬವೂ ಧನ್ಯವಾದ ತಿಳಿಸಿ ಸಂತಸ ವ್ಯಕ್ತಪಡಿಸಿದರು.