ಮಂಗಳೂರು, ಆ.30(Daijiworld News/SS): ನಿರಂತರವಾಗಿ ಸುರಿದ ಮಳೆಗೆ ಮನೆಯೊಂದಕ್ಕೆ ಮರ ಬಿದ್ದು ಹಾನಿಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ತಕ್ಷಣ, ಸ್ಥಳಕ್ಕೆ ಆಗಮಿಸಿ ನೆರವಿಗೆ ನಿಂತು ಕರ್ತವ್ಯ ಪ್ರಜ್ಞೆಯನ್ನು ಮೆರೆದ ಉರ್ವ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನು ಸ್ಥಳೀಯರು ಅಭಿನಂದಿಸಿದ್ದಾರೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷ ಅವರು ಕೂಡ ಠಾಣೆಯ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿ, ಮೆಚ್ಚುಗೆ ಪತ್ರಗಳನ್ನು ನೀಡಿ ಅಭಿನಂದಿಸಿದ್ದಾರೆ.
ನಗರದ ಆಲಗುಡ್ಡ ಕೋಡಿಕಲ್ ನಿವಾಸಿ ಡೇನಿಯಲ್ ಡೆರಿಕ್ ಪೈಸ್ ಎಂಬವರ ಮನೆ ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಹಾನಿಗೊಳಗಾಗಿತ್ತು. ಮನೆ ಮೇಲೆ ಮರ ಬಿದ್ದು ಸಾಕಷ್ಟೂ ತೊಂದೆರೆಯಾಗಿತ್ತು. ಈ ವೇಳೆ ಉರ್ವ ಠಾಣೆಯ ಸಹಾಯಕ ವೃತ್ತ ನಿರೀಕ್ಷಕ ದೇಜಪ್ಪ ಅವರ ನೇತ್ರತ್ವದಲ್ಲಿ, ಸಿಬ್ಬಂದಿಗಳಾದ ನವೀನ್, ಮೋಹನ್ ಮತ್ತು ವಿನ್ಸೆಂಟ್ ಕುರುವಿಲ್ಲಾ ನೆರವಿಗೆ ಧಾವಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದರು. ಇದೀಗ ಇವರ ಮಾನವೀಯ ಕಾರ್ಯಕ್ಕೆ ಕಮಿಷನರ್ ಸೇರಿದಂತೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.