ಮಂಗಳೂರು, ಆ.30(Daijiworld News/SS): ತೀರಾ ಆರ್ಥಿಕ ಸಂಕಷ್ಟದಲ್ಲಿದ್ದ ಮತ್ತು ಅನಾರೋಗ್ಯಕ್ಕೆ ಒಳಗಾಗಿ ಸಾಕಷ್ಟೂ ನೊಂದಿದ್ದ ಮೂರು ಬಡ ಕುಟುಂಬಗಳಿಗೆ ಅಮೃತಸಂಜೀವಿನಿ ಎಂಬ ಸಂಸ್ಥೆಯು ಮಾನವೀಯ ನೆರವು ನೀಡಿ ಮಾದರಿಯಾಗಿದೆ.
ಪುತ್ತೂರು ತಾಲೂಕಿನ ಕಬಕದ ಮುರ ನಿವಾಸಿ ಚಂದ್ರಶೇಖರ್ ಗಂಟಲು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಈ ಬಡ ಕುಟುಂಬದ ನೆರವಿಗೆ ಧಾವಿಸಿದ ಅಮೃತಸಂಜೀವಿನಿ ಸುಮಾರು 70 ಸಾವಿರ ಸಹಾಯಧನ ನೀಡಿ ಕಷ್ಟಕ್ಕೆ ಸ್ಪಂದಿಸಿದೆ.
ಮಾತ್ರವಲ್ಲ, ಪಚ್ಚನಾಡಿ ಆಶ್ರಯ ಕಾಲೋನಿಯಲ್ಲಿ ವಾಸವಾಗಿರುವ ದುರ್ಗಾಪ್ರಸಾದ್ ಅಪಘಾತಕ್ಕೆ ಬಲಿಯಾಗಿ ಒಂದು ವರ್ಷದಿಂದ ನಡೆಯಲಾಗದ ಪರಿಸ್ಥಿತಿಯಲ್ಲಿ ಇದ್ದು, ತೀರಾ ತೊಂದರೆಗೆ ಒಳಗಾಗಿದ್ದರು. ಈ ಕುಟುಂಬದ ಕಷ್ಟಕ್ಕೆ ಸ್ಪಂದಿಸಿದ ಅಮೃತಸಂಜೀವಿನಿ ರೂ. 45,000 ಸಹಾಯಧನ ನೀಡಿರುತ್ತಾರೆ.
ಇನ್ನು, ಮಂಗಳೂರಿನ ಬಜಾಲ್ನ ಪೈಸಲ್ ನಗರ ನಿವಾಸಿ ಜಯಲಕ್ಷ್ಮಿ ಎಂಬವರು ಇಂದೋ ನಾಳೆಯೋ ಬಿದ್ದು ಹೋಗುವಂತ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಬಾಲ್ಯದಿಂದಲೂ ಮೂರ್ಚೆ ರೋಗ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರ ಕಷ್ಟವನ್ನು ಅರಿತ ಅಮೃತಸಂಜೀವಿನಿ ರೂ. 45 ಸಾವಿರ ಸಹಾಯಧನ ನೀಡಿ ಮಾನವೀಯತೆ ಮೆರೆದಿದೆ.