ಮಂಗಳೂರು, ಡಿ 25: ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಗೋರಿಗುಡ್ಡೆಯ ಪರ್ಪಲ್ ಸ್ಟ್ರೀಟ್ ಎಂಬಲ್ಲಿ ದುಷ್ಕರ್ಮಿಗಳ ತಂಡವೊಂದು ಯುವಕನನ್ನು ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೃತರನ್ನು ಗೋರಿಗುಡ್ಡೆ ನಿವಾಸಿ ಮೆರ್ಲಿಕ್ ಡಿಸೋಜ (26) ಎಂದು ಗುರುತಿಸಲಾಗಿದೆ. ನಿನ್ನೆ ತಡರಾತ್ರಿ ಐದು ಮಂದಿಯ ತಂಡವೊಂದು ಮೆರ್ಲಿಕ್ ಡಿಸೋಜ ಮನೆಗೆ ನುಗ್ಗಿ ತಲವಾರಿನಿಂದ ಯದ್ವಾತದ್ವಾ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡು ಮೆರ್ಲಿಕ್ ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆರ್ಲಿಕ್ ಡಿಸೋಜ ರೌಡಿ ಶೀಟರ್ ಆಗಿದ್ದು, ಈತ ರೌಡಿ ಮಂಕಿ ಸ್ಟ್ಯಾಂಡ್ ವಿಜಯ್ ಸಹಚರ ಎಂದು ತಿಳಿದುಬಂದಿದೆ. ಈತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.