ಬೆಳ್ತಂಗಡಿ ಡಿ 25: ತಾಲೂಕಿನ ಮರೋಡಿ ಗ್ರಾಮದಲ್ಲಿ ಮತ್ತೆ ಚಿರತೆಯೊಂದು ಡಿ 23 ರಶನಿವಾರ ರಾತ್ರಿ ಪತ್ತೆಯಾಗಿದೆ. ಬಜಿಲಪಾದೆ- ಕೂಕ್ರಬೆಟ್ಟು ರಸ್ತೆಯ ತಮ್ಮಯಿಲು ಎಂಬಲ್ಲಿ ಭಾರೀ ಗಾತ್ರದ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಹಾರೊದ್ದು ಜಗದೀಶ್ ಕುಮಾರ್ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಚಿರತೆ ರಸ್ತೆ ದಾಟುತ್ತಿತ್ತು. ತಕ್ಷಣ ಇದನ್ನು ಗಮನಿಸಿದ ಕಾರು ನಿಲ್ಲಿಸಿದ ಅವರು, ಚಿರತೆ ಹಾಡಿಯೊಳಗೆ ಹೋಗಿ ಮರೆಯಾದ ಬಳಿಕ ಮುಂದೆ ಸಾಗಿದ್ದಾರೆ. ಈ ಘಟನೆಯ ಎರಡು ದಿನದ ಹಿಂದೆ ಪಾಣಾಲು ಸಮೀಪದ ನಡುಚ್ಚೂರು ಎಂಬಲ್ಲಿ ರಾತ್ರಿ ಚಿರತೆ ರಸ್ತೆ ದಾಟುತ್ತಿದ್ದುದನ್ನು ಬೈಕ್ ನಲ್ಲಿ ಸಾಗುತ್ತಿದ್ದ ಪ್ರಸಾದ್ ಗಮನಿಸಿದ್ದಾರೆ. ಕಳೆದ ವರ್ಷವೂ ಮರೋಡಿಯಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಅದನ್ನು ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಆದರೆ, ಬಳಿಕ ಚಿರತೆ ಪತ್ತೆಯಾಗಿರಲಿಲ್ಲ. ಇದೀಗ ಮತ್ತೆ ಜನವಸತಿ ಪ್ರದೇಶದಲ್ಲೇ ಚಿರತೆ ಇರುವುದು ಗೊತ್ತಾಗುತ್ತಿದ್ದಂತೆ ಸ್ಥಳೀಯರು ಭಯಭೀತರಾಗಿದ್ದಾರೆ. ಈ ಚಿರತೆಯನ್ನು ಸ್ಥಳಾಂತರಿಸುವಂತೆ ಮತ್ತೆ ಅರಣ್ಯ ಅಧಿಕಾರಿಯನ್ನು ಆಗ್ರಹಿಸಿದ್ದಾರೆ.