ಮಂಗಳೂರು, ಆ.31(Daijiworld News/SS): ಇನ್ನೇನು ಕೆಲವೇ ದಿನಗಳಲ್ಲಿ ಗೌರಿ - ಗಣೇಶ ಹಬ್ಬದ ಸಂಭ್ರಮ. ಎಲ್ಲೆಡೆ ಗಣಪನ ಮೂರ್ತಿಗಳ ವ್ಯಾಪಾರ ಮತ್ತು ಗಣೇಶೋತ್ಸವದ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಈ ಹಿನ್ನಲೆ, ಅರ್ಥಪೂರ್ಣವಾದ ಗಣೇಶೋತ್ಸವದ ಜೊತೆಗೆ ಮಣ್ಣಿನ ಗಣಪನನ್ನು ಪೂಜಿಸಿ ಪ್ರಕೃತಿಯನ್ನು ಕಾಪಾಡೋಣ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಕರೆ ನೀಡಿದ್ದಾರೆ.
ಮಂಗಳೂರಿನ ಜನತೆಗೆ ಗಣೇಶೋತ್ಸವ ಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಸಿರುವ ಶಾಸಕ ಕಾಮತ್, ಹಿಂದಿನ ಗಣೇಶ ಉತ್ಸವದ ಪರಂಪರೆಗೆ ಧಕ್ಕೆಯಾಗದಂತೆ ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಬೇಕು. ನಮ್ಮ ದೇಶದ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಹಬ್ಬಕ್ಕೆ ಕಳೆ ತರಬೇಕು. ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕರು ಪುಣೆಯಲ್ಲಿ 1893ರಲ್ಲಿ ಆರಂಭಿಸಿದ ಗಣೇಶೋತ್ಸವ ಆ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದ ಒಂದು ಅಂಗ ಎನಿಸಿತ್ತು. ಹೀಗಾಗಿ ಜನರಲ್ಲಿ ಬಾಂಧವ್ಯ ಬೆಸೆಯಲು ಮತ್ತು ಒಗ್ಗಟ್ಟಿನಿಂದ ಬದುಕಲು ತಿಲಕರ ಆಶಯದಂತೆ ಗಣೇಶೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದ್ದಾರೆ.
ತಿಲಕರು ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದಾಗ ಲಕ್ಷಾಂತರ ಭಾರತೀಯರ ಕಂಗಳಲ್ಲಿ ಸ್ವಾತಂತ್ರದ ಕನಸಿತ್ತು. ಹೀಗಾಗಿ ನಾವು ಕೂಡ ಅರ್ಥಪೂರ್ಣವಾದ ಗಣೇಶೋತ್ಸವವನ್ನು ಆಚರಿಸುವುದರೊಂದಿಗೆ ಗಣಪತಿಯ ಹೆಸರಿನಲ್ಲಿ ದೇಶದ ಸಂಸ್ಕೃತಿಯ ಅನಾವರಣ ಮಾಡಬೇಕು. ಬಲಿಷ್ಠ, ಸುಂದರ ದೇಶವನ್ನು ಕಟ್ಟಬೇಕು. ಈ ಮೂಲಕ ದೇಶಪ್ರೇಮ ಮೆರೆಯಬೇಕು ಎಂದು ಸಲಹೆ ನೀಡಿದ್ದಾರೆ.
ಜೊತೆಗೆ ಪರಿಸರ ಹಾಗೂ ಜಲಮೂಲಗಳ ಸಂರಕ್ಷಣೆಗಾಗಿ ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪೂಜಿಸಿ ಹಬ್ಬವನ್ನು ಆಚರಿಸೋಣ ಎಂದು ಶಾಸಕ ಕಾಮತ್ ಮನವಿ ಮಾಡಿದ್ದಾರೆ.