ಮಂಗಳೂರು,ಆ 31 (Daijiworld News/RD): ಕರಾವಳಿಯಲ್ಲಿ ಹುಟ್ಟಿ ದೇಶಾದ್ಯಂತ ಛಾಪು ಮೂಡಿಸಿದ ಜಿಲ್ಲೆಯ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕುಗಳನ್ನ ಕೇಂದ್ರ ವಿಲೀನಗೊಳಿಸಿದೆ. ಈ ಮೂಲಕ ತುಳುನಾಡಿನ ಬ್ಯಾಂಕುಗಳು ಅಸ್ತಿತ್ವವನ್ನು ಕಳೆದುಕೊಂಡಿದೆ.
ದೇಶವನ್ನು ಆರ್ಥಿಕ ಸದೃಡಗೊಳಿಸಿ, ಜಾಗತೀಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸಾರ್ವಜನಿಕ ಸ್ವಾಮ್ಯದ 10 ಬ್ಯಾಂಕುಗಳನ್ನು ವಿಲೀನ ಮಾಡಿ ಒಟ್ಟು ನಾಲ್ಕು ಬ್ಯಾಂಕುಗಳನ್ನಾಗಿ ರೂಪಿಸಲಾಗುತ್ತದೆ ಎಂದು ಘೋಷಿಸಿದ್ದಾರೆ. ಇದರಿಂದಾಗಿ ಕರಾವಳಿಯೆಲ್ಲೆಡೆ ಬೇರು ಬಿಟ್ಟಿದ್ದ ವಿಜಯಾ ಬ್ಯಾಂಕ್ ಸೇರಿದಂತೆ, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ಗಳ ಅಧ್ಯಾಯ ಕೊನೆಗೊಂಡಿದೆ.
ಸಿಂಡಿಕೇಟ್ ಬ್ಯಾಂಕ್
ಬಡಜನರ ಶಕ್ತಿಯೆಂದೇ ಬಿಂಬಿತವಾದ ಸಿಂಡಿಕೇಟ್ ಬ್ಯಾಂಕ್ ನ್ನು 1925 ರಲ್ಲಿ 'ಕೆನರಾ ಇಂಡಸ್ಟ್ರಿಯಲ್ ಆ್ಯಂಡ್ ಬ್ಯಾಂಕಿಂಗ್ ಸಿಂಡಿಕೇಟ್' ನಾಮಾಕಿಂತದಡಿ ಸ್ಥಾಪನೆಯಾದ ಸಿಂಡಿಕೇಟ್ ಬ್ಯಾಂಕ್, ಉದ್ಯಮಿ ಉಪೇಂದ್ರ ಅನಂತ ಪೈ, ಎಂಜಿನಿಯರ್ ವಾಮನ್ ಕುಡ್ವ, ವೈದ್ಯ ಡಾ. ಟಿಎಂಎ ಪೈ ಸೇರಿ ಕೇವಲ 8 ಸಾವಿರ ರೂ. ಬಂಡವಾಳ ಹೂಡಿಕೆ ಮಾಡುವ ಮೂಲಕ ಆರಂಭಗೊಳಿಸಿದ್ದರು. ಸಂಕಷ್ಟಕ್ಕೀಡಾದ ಬಡವರ ಏಳಿಗೆಯೇ ಈ ಬ್ಯಾಂಕಿನ ಮುಖ್ಯ ಉದ್ದೇಶವಾಗಿದ್ದು, ಬಡಜನರಲ್ಲಿ ಉಳಿತಾಯ ಮನೋಭಾವ ಬೆಳೆಸಲು ಏಜೆಂಟರ್ ಗಳು ಜನರ ಮನೆ ಬಾಗಿಲಿಗೆ ಹೋಗಿ ದಿನಕ್ಕೆ ಎರಡಾಣೆ ಸಂಗ್ರಹಿಸುವ ಮೂಲಕ ಶುರು ಮಾಡಿದ ಪಯಣ ಇಂದು ದೇಶಾದ್ಯಂತ ಬ್ಯಾಂಕುಗಳನ್ನು ವಿಸ್ತರಿಸುವ ಮಟ್ಟಗೆ ಬೆಳೆದು ನಿಂತಿದೆ. ಅಂದಿನ ಕಾಲದಲ್ಲಿ ಪಿಗ್ಮಿ ಮೂಲಕವೇ 2 ಕೋಟಿ ರೂ. ಠೇವಣಿ ಸಂಗ್ರಹಿಸಿದ ಕೀರ್ತಿಗೆ ಈ ಬ್ಯಾಂಕ್ ಪಾತ್ರವಾಗುತ್ತದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಉಳಿತಾಯದ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಕೃಷಿ ಸಾಲ ನೀಡಲು ಗ್ರಾಮೀಣ ಬ್ಯಾಂಕ್ ನ್ನು ಕೂಡ ಸ್ಥಾಪಿಸಿರುವುದು ವಿಶೇಷ.
ಕೆನರಾ ಬ್ಯಾಂಕ್
1906 ರಲ್ಲಿ ಹಿಂದೂ ಶಾಶ್ವತ ನಿಧಿ ಎಂಬ ಹೆಸರಿನಿಂದ ಜನಜನಿತವಾಗಿರುವ ಕೆನರಾ ಬ್ಯಾಂಕ್ ಇದರ ಮೂಲ ಮಂಗಳೂರು. ಅಮ್ಮೆಂಬಾಳ್ ಸುಬ್ಬರಾವ್ ಪೈ ಇದರ ಸ್ಥಾಪಕರಾಗಿದ್ದು, ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್ಗಳಲ್ಲಿ ಕೆನರಾ ಬ್ಯಾಂಕ್ ಕೂಡ ಗುರುತಿಸಿಕೊಂಡಿದೆ. 19 ಜುಲೈ, 1969 ರಲ್ಲಿ ರಾಷ್ಟ್ರೀಕರಣಗೊಂಡ ಈ ಬ್ಯಾಂಕ್ ಆಡಳಿತ ದೃಷ್ಟಿಯಿಂದ ಬ್ಯಾಂಕ್ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಕರಾವಳಿಯಲ್ಲಿ ಬೆಳೆದ ಈ ಬ್ಯಾಂಕಿನಲ್ಲಿ ಇಲ್ಲಿನ ಹೆಚ್ಚಿನ ಜನರು ತಮ್ಮ ಖಾತೆಯನ್ನು ಇಲ್ಲಿ ತೆರೆದಿದ್ದರು. ವಿಜಯಾ ಬ್ಯಾಂಕ್ ವಿಲೀನದ ಸಂದರ್ಭದಲ್ಲೇ ಕೆನರಾ ಬ್ಯಾಂಕ್ನ ಹೆಸರೂ ಕೇಳಿ ಕೂಡ ಪ್ರಚಲಿತದಲ್ಲಿದ್ದು, ಈ ಬ್ಯಾಂಕನ್ನು ಉಳಿಸುವ ಬಗ್ಗೆ ಕರಾವಳಿಯಾದ್ಯಂತ ದನಿ ಕೇಳಿಬಂದಿತ್ತು.
ಕಾರ್ಪೊರೇಷನ್ ಬ್ಯಾಂಕ್
ತುಳುನಾಡಿನಲ್ಲಿ ಹುಟ್ಟಿ ಬೆಳೆದ ಬ್ಯಾಂಕಗಳಲ್ಲಿ ಕಾರ್ಪೊರೇಷನ್ ಬ್ಯಾಂಕ್ ಕೂಡ ಒಂದಾಗಿದ್ದು, ಇದೀಗ ಈ ಬ್ಯಾಂಕು ಕೂಡ ಯೂನಿಯನ್ ಬ್ಯಾಂಕ್ ಜತೆಯಲ್ಲಿ ವಿಲೀನವಾಗಲಿದೆ.ಕಾರ್ಪೊರೇಶನ್ ಬ್ಯಾಂಕ್ ಸಾರ್ವಜನಿಕ ವಲಯದ ಒಂದು ಬ್ಯಾಂಕಿಂಗ್ ಸಂಸ್ಥೆಯಾಗಿದ್ದು, ಮಾರ್ಚ್ 12 1906 ರಂದು ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ನೇತೃತ್ವದಲ್ಲಿ ಉಡುಪಿಯಲ್ಲಿ ಸ್ಥಾಪಿಸಲಾಯಿತು. ಈ ಬ್ಯಾಂಕ್ ಮದ್ರಾಸ್ ಪ್ರಾಂತ್ಯದ ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯ ಬ್ಯಾಂಕಿಂಗ್ ಸಂಸ್ಥೆ, ಹಾಗೂ ಭಾರತದ ಹಳೆಯ ಬ್ಯಾಂಕುಗಳಲ್ಲೊಂದು. ಕರಾವಳಿ ಪ್ರಮುಖ ವ್ಯಾಪಾರ ಕೆಂದ್ರವಾಗಿದ್ದು, ಆಗಿನ ಕಾಲದಲ್ಲಿ ಯಾವುದೇ ಬ್ಯಾಂಕ್ ಇರಲಿಲ್ಲ. ಆ ಸಂದರ್ಭದಲ್ಲಿ ಸ್ಥಾಪನೆಯಾದ ಕಾರ್ಪೊರೇಷನ್ ಬ್ಯಾಂಕ್, 1980ರಲ್ಲಿ ಇತರ 5 ಖಾಸಗಿ ಬ್ಯಾಂಕ್ಗಳ ಜತೆಗೆ ರಾಷ್ಟ್ರೀಕೃತಗೊಂಡಿತ್ತು. ಭಾರತವಲ್ಲದೇ ಲಂಡನ್, ಮಾಸ್ಕೋ, ಹಾಂಗ್ಕಾಂಗ್, ದೋಹಾ, ದುಬೈ ಮುಂತಾದ ಸ್ಥಳಗಳಲ್ಲಿಯು ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದ್ದು, ಈ ಬ್ಯಾಂಕ್ ಆರಂಭಗೊಂಡು 114 ವರ್ಷಗಳು ಪೂರೈಸಿದ್ದು, ಸಾರ್ವಜನಿಕ ವಲಯದಲ್ಲಿ ಜನಪ್ರಿಯವಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಿದೆ. ಇದರಿಂದ ತನ್ನ ಅಸ್ತಿತ್ವ ಕಳೆದುಕೊಂಡು ಇತಿಹಾಸದ ಪುಟ ಸೇರಿದ್ದು, ಇದರ ಸಾಲಿಗೆ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕುಗಳು ಸೇರಿಕೊಳ್ಳಿಲಿದೆ.