ಮೂಡುಬಿದಿರೆ,ಆ 31 (Daijiworld News/RD): ತಾಲೂಕಿನ ಮಾಂಟ್ರಾಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಶಿಕ್ಷಕಿಯೊಬ್ಬರು ಸ್ವಂತ ಖರ್ಚಿನಲ್ಲಿ ಅಡಕೆತೋಟ ನಿರ್ಮಾಣ ಮಾಡಿದ್ದು, ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ. ಎರಡು ವರ್ಷಗಳ ಹಿಂದೆ ಖಾಲಿ ಜಾಗವಿದ್ದ ಜಾಗದಲ್ಲೀಗ ಸುಂದರ ತೋಟ ನಿರ್ಮಾಣವಾಗಿದೆ.
ಮಾಂಟ್ರಾಡಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 16 ವರ್ಷಗಳಿಂದ ಸಹ ಶಿಕ್ಷಕಿಯಾಗಿರುವ ಜಾನೆಟ ಲೋಬೊ ಶಾಲೆಯ ಅಭಿವೃದ್ಧಿಗೆ ಪೂರಕವಾಗುವಂತಹ ಅಡಕೆ ತೋಟ ನಿರ್ಮಾಣ ಮಾಡಿದ್ದಾರೆ. ಅವರು ಎರಡು ವರ್ಷಗಳ ಹಿಂದೆ ಶಾಲೆಯ ಖಾಲಿ ಜಾಗವನ್ನು ಸಮತಟ್ಟುಗೊಳಿಸಿ, ಸ್ವಂತ ಖರ್ಚಿನಲ್ಲಿ50 ಸಾವಿರ ವಿನಿಯೋಗಿಸಿದ್ದಾರೆ. 105 ಅಡಕೆ ಗಿಡಗಳನ್ನು ನೆಟ್ಟು, ಪೋಷಣೆ ಮಾಡುತ್ತಿದ್ದಾರೆ. ಅದರ ರಕ್ಷಣೆಗೋಸ್ಕರ ಬೇಲಿ ಕೂಡ ನಿರ್ಮಾಣ ಮಾಡಲಾಗಿದೆ. ಗಿಡಗಳಿಗೆ ಬೇಕಾದ ನೀರಿನ ವ್ಯವಸ್ಥೆಯನ್ನು ಕೂಡ ಜಾನೆಟ ಕಲ್ಪಿಸಿದ್ದಾರೆ. ಅಡಕೆ ಗಿಡದಿಂದ ಶಾಲೆಯ ವಾತಾವರಣ ಹಸಿರಾಗುತ್ತದೆ ಮಾತ್ರವಲ್ಲ ಮುಂದೆ ಅಡಕೆಯಿಂದ ಬಂದಂತಹ ಆದಾಯವನ್ನು ಶಾಲೆಯ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಬಹುದೆನ್ನುವ ಉದ್ದೇಶದಿಂದ ಜಾನೆಟ ತೋಟ ನಿರ್ಮಾಣ ಮಾಡಿದ್ದಾರೆ.
ಎರಡು ವರ್ಷಗಳ ಹಿಂದಿ ಶಿಕ್ಷಣಾಧಿಕಾರಿಯವರು ಖಾಲಿ ಜಾಗದಲ್ಲಿ ಕೈತೋಟ ನಿರ್ಮಾಣ ಮಾಡುವಂತೆ ಸೂಚಿಸಿದ್ದರು. ಇದರೊಂದಿಗೆ ಬಂಟ್ವಾಳದ ಶಿಕ್ಷಕರೊಬ್ಬರು ಈ ರೀತಿಯಲ್ಲಿ ತೋಟ ಮಾಡಿರುವುದರಿಂದ ಸ್ಪೂರ್ತಿ ಪಡೆದಿರುವ ಜೆನೆಟ ಅವರು ಅಡಕೆ ತೋಟ ನಿರ್ಮಾಣ ಯಶಸ್ವಿ ಪ್ರಯತ್ನ ಮಾಡಿದ್ದಾರೆ. ಜಾನೆಟ ಈ ಚಿಂತನೆಗೆ ಸಾಥ್ ನೀಡಿ, ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಮಾಡಿದವರು ಅವರ ಪತಿ, ಸಾರಿಗೆ ಉದ್ಯಮಿ ರೊನಾಲ್ಡ್ ಎಫ್ ಕಾರ್ಡೋಜ. ತೋಟ ನಿರ್ಮಾಣ ಬಳಿಕ ಅದಕ್ಕೆ ಬೇಕಾದ ಗೊಬ್ಬರವನ್ನು ಸ್ಥಳೀಯರಾದ ಸುಂದರ ಪೂಜಾರಿ, ನವೀನ್ ನಾಯ್ಕ್ ನೀಡುತ್ತಿದ್ದಾರೆ.
ಬಿಸಿಯೂಟಕ್ಕೆ ಉಪಕಾರಿ ತರಕಾರಿ ತೋಟ:
ಶಾಲೆಯ ಶಿಕ್ಷಕರು, ಎಸ್ಡಿಎಂ ಸದಸ್ಯರು ಹಳೇ ವಿದ್ಯಾರ್ಥಿಗಳ ನೆರವಿನೊಂದಿಗೆ ತರಕಾರಿ ತೋಟ ಮಾಡಿದ್ದು, ಬಿಸಿಯೂಟಕ್ಕೆ ಸಹಕಾರಿಯಾಗಿದೆ. ಬಿಸಿಯೂಟಕ್ಕೆ ಬೇಕಾದ ತೆಂಗಿನಕಾಯಿಗಳು ಕೂಡ ಶಾಲೆಯ ಆವರಣದಲ್ಲಿರುವ ನಾಲ್ಕು ತೆಂಗಿನ ಮರಗಳಿಂದ ಸಿಗುತ್ತಿದೆ. 5 ತೆಂಗಿನ ಗಿಡಗಳನ್ನು ನೆಡಲಾಗಿದೆ. 5 ಹಲಸಿನ ಮರಗಳಿಂದ ಹಲಸು ಕೂಡ ಸಿಗುತ್ತಿದ್ದು, ಒಟ್ಟು ಬಿಸಿಯೂಟಕ್ಕೆ ಸಹಕಾರಿಯಾಗಿದೆ. ದಾನಿಗಳು, ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ.