ಉಡುಪಿ,ಆ 31 (Daijiworld News/RD): ಕರಾವಳಿಯಲ್ಲಿ ಹುಟ್ಟಿದ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನಗೊಳ್ಳುತ್ತಿದೆ. ಅನೇಕ ಶಾಖೆಗಳು ಮುಚ್ಚುತ್ತಿವೆ. ಈ ಮೂಲಕ ಪ್ರಧಾನಿ ಕಾರ್ಪೋರೇಟ್ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ವಿದೇಶಿ ಬ್ಯಾಂಕುಗಳು ಸ್ಥಾಪನೆಯಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ನಡೆದ ಪತ್ತಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದ್ದು, ಕೆಂದ್ರ ಸರ್ಕಾರ, ಜನರಿಂದ ಬ್ಯಾಂಕನ್ನು ದೂರ ಇಡುವ ಪ್ರಯತ್ನ ನಡೆಸಲಾಗುತ್ತಿದೆ, ಜೊತೆಗೆ ಕೈಗಾರಿಕೆದಾರರು ಉದ್ಯಮವನ್ನು ಮುಚ್ಚುತ್ತಿದ್ದು, ಕರಾವಳಿ ಬ್ಯಾಂಕಿಂಗ್ ವ್ಯಕ್ತಿತ್ವಗಳನ್ನು ನಾಶ ಗೊಳಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಹಿಂದೆಂದೂ ಕಾಣದ ಪ್ರಾಕೃತಿ ವಿಕೋಪ ಉಂಟಾಗಿದೆ. 5 ಲಕ್ಷಕ್ಕೂ ಹೆಚ್ಚುಮನೆ ನಾಶವಾಗಿದೆ. ಪಶ್ಚಿಮ ಘಟ್ಟವೇ ಕೆಳಗೆ ಬಂದಂತಿದೆ. ಈ ಬಾರಿಯ ಪ್ರವಾಹವನ್ನು ಸಾಮಾನ್ಯ ವಿಕೋಪದಂತೆ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಅದರ ಪರೀಶೀಲನೆಗೆ ಸಮಿತಿ ರಚನೆ ಆಗಬೇಕಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ಸೇರಿ, ಪುನರ್ವಸತಿಯಂತ ವಿನೂತನ ಕಾರ್ಯಕ್ರಮವನ್ನು ಸರಕಾರ ಕೈಗೊಳ್ಳಬೇಕು. ಕೊಡಗಿಗೆ ಪರಿಹಾರವಾಗಿ 10 ಲಕ್ಷ ರೂ ಪರಿಹಾರ ಧನ ನೀಡಲಾಗಿದೆ. ಈಗ ಸರಕಾರ ಕೊಡುತ್ತಿರುವ 10000 ರೂ ಎಲ್ಲಿಗೂ ಸಾಲಲ್ಲ. ಕೇಂದ್ರ ಸರಕಾರದ ನಿಯೋಗವೇ ಬಂದು ಪರೀಶಿಲಿಸಿದ ನಂತರ ಇನ್ನೇನು ಬೇಕು. ಇದನ್ನು ಕೇಂದ್ರ ಸರಕಾರ ಮುತುವರ್ಜಿ ಇಟ್ಟು ಕೆಲಸ ಮಾಡಬೇಕು. 22 ದಿನ ಕಳೆದರೂ ಇದುವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವು ನೀಡಲು ಮುಂದಾಗಿಲ್ಲ ಎಂದು ರಾಜ್ಯ ಮುಖ್ಯಮಂತ್ರಿಯವರನ್ನು ಟೀಕಿಸಿದರು.
2009 ರಲ್ಲಿ ಮಾಜಿ ಪ್ರಧಾನಿ ಮನಮೋಹನ ಕರ್ನಾಟಕಕ್ಕೆ ಪ್ರವಾಹ ಬಂದಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ 1,06,000 ಕೊಟಿ ಹಣವನ್ನು ಘೋಷಣೆ ಮಾಡಿದ್ದರು. ಆದರೆ ಈಗಿನ ಸರಕಾರ ಜನರಿಗೆ ಸ್ಪಂದಿಸುತ್ತಿಲ್ಲ, ಪ್ರವಾಹದ ಬಗ್ಗೆ ಮುಂಜಾಗೃತೆ ವಹಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರ ಒಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರಕಾರ ಯಾವುದೇ ಉನ್ನತ ನಿರ್ಧಾರ ತೆಗೆದುಕೊಳ್ಳುವಾಗ ವಿರೋಧ ಪಕ್ಷದ ನಾಯಕರನ್ನು ಗಣನೆಗೆ ತೆಗೆದುಕೊಂಡಿಲ್ಲ. ರಾತ್ರೋರಾತ್ರಿ ನೋಟು ಅಮಾನ್ಯೀಕರಣ, ಆರ್ಟಿಕಲ್ 370 ಯಂತಹ ಕಾಯ್ದೆ ಮಾಡಿ ಮುಂಜಾನೆಯಾಗುತ್ತಲೇ ಅದನ್ನು ಘೋಷಣೆ ಮಾಡಿಬಿಡುತ್ತಾರೆ. ಅಲ್ಲದೆ ಇಂತಹ ವಿಚಾರಗಳು ಪಾರ್ಲಿಮೆಂಟಿನಲ್ಲಿ ಚರ್ಚೆ ಕೂಡ ಆಗುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಅಭಿವೃದ್ದಿಗೆ ಮಾರಕವಾದದ್ದು ಎಂದು ಖೇದ ವ್ಯಕ್ತಪಡಿಸಿದರು. ಮೋದಿ ಬಗ್ಗೆ ಭಯ ಬೇಡ, ಆದರೆ ಅವರ ಐಟಿ, ಇಡಿ ಅಧಿಕಾರಿಗಳು ಭಯ ಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಹರ್ಷ ಮೊಯ್ಲಿ, ಸಭಾಪತಿ, ಎಂ.ಎ.ಗಫೂರ್, ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ, ಅಶೋಕ ಕುಮಾರ್ ಕೊಡವೂರು, ಬಾಸ್ಕರ್ ಕಿದಿಯೂರು ಮುಂತಾದವರು ಉಪಸ್ಥಿತರಿದ್ದರು.