ಕುಂದಾಪುರ ಡಿ 25 : ಸಾಲಿಗ್ರಾಮದ ಪಟ್ಟಣ ಪಂಚಾಯತ್ ಸಭೆಯಲ್ಲಿ ಸದಸ್ಯರೊಬ್ಬರು ಭಗವದ್ಗೀತೆಯನ್ನು ಎಸೆದಿದ್ದಾರೆ ಎಂದು ಆರೋಪಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಬಾರ್ ಒಂದರ ಲೈಸೆನ್ಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಚ ಪಡೆದಿಲ್ಲವೆಂದು ಭಗವದ್ಗೀತೆ ಮೇಲೆ ಪ್ರಮಾಣ ಮಾಡುವಂತೆ ಆಡಳಿತ ಸದಸ್ಯ ರಾಜು ಪೂಜಾರಿ ಅವರಿಗೆ ಪ್ರತಿಪಕ್ಷ ಸದಸ್ಯರೊಬ್ಬರು ಸವಾಲು ಹಾಕಿದ್ದರು. ಇದಕ್ಕೆ ಬಿಜೆಪಿ ಸದಸ್ಯ ರಾಜು ಪೂಜಾರಿ ಕೆರಳಿ ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಬಳಿಕ ಟೇಬಲ್ ಮೇಲೆ ಕುಕ್ಕಿದ್ದಾರೆ. ಇದೇ ವೇಳೆ ಸಾಲಿಗ್ರಾಮದಲ್ಲಿರುವ ವಿವೇಕ ಪದವಿ ಪೂರ್ವ ಕಾಲೇಜಿನ ಬಳಿ ಬಾರ್ ತೆರೆಯಲು ಅನುಮತಿ ನೀಡಿರುವ ವಿಚಾರದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಇನ್ನೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರತ್ನ ಗಾಣಿಗ ಮತ್ತು ಮುಖ್ಯಾಧಿಕಾರಿ ಶ್ರೀಪಾದ್ ಭಟ್ ಅವರು ಬಾರ್ ಗೆ ಅನುಮತಿ ನೀಡಿಕೆಗೆ ಹಣ ಪಡೆದಿಲ್ಲವೆಂದು ಭಗವದ್ಗೀತೆ ಹಾಗೂ ಹನುಮಂತನ ಮೇಲೆ ಪ್ರಮಾಣ ಮಾಡುವಂತೆ ವಿಪಕ್ಷದ ಸದಸ್ಯರು ಆಗ್ರಹಿಸಿದರು. ಒಟ್ಟಿನಲ್ಲಿ ಬಾರ್ ಲೈಸೆನ್ಸ್ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಭಗವದ್ಗೀತೆ ಮತ್ತು ಹನುವಂತ ದೇವರ ಫೋಟೋ ಬಳಸಿ ಪ್ರಮಾಣ ಮಾಡುವಂತೆ ಮಾಡಿರುವ ಸದಸ್ಯರ ವರ್ತನೆ ಇದೀಗ ಎಲ್ಲೆಡೆ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇನ್ನೊಂದೆಡೆ ತಾನು ಭಗವದ್ಗೀತೆ ಎಸೆದಿಲ್ಲ ಎಂದು ರಾಜು ಪೂಜಾರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದಾರೆ.