ಮಂಗಳೂರು, ಆ.31(Daijiworld News/SS): ಸೆ.02ರಿಂದ 12ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗಣೇಶೋತ್ಸವ ಹಬ್ಬದ ಪ್ರಯುಕ್ತ ನಡೆಯುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವೈಭವದ ಶೋಭಾಯಾತ್ರೆ ಇರುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷಿಯಿಂದ ಬಾರ್ ಎಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್/ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ದ.ಕ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ, ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯುವ ದಿನದಂದು ( ಸೆ.02ರಿಂದ 12ರವರೆಗೆ ) ಸೂಚಿಸಿದ ಸಮಯದವರೆಗಿನ (ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ) ಅವಧಿಯನ್ನು ಮದ್ಯಮುಕ್ತ ದಿನಗಳೆಂದು ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ಗಣೇಶೋತ್ಸವ ನಡೆಯುವ ದಿನ ಕರ್ನಾಟಕ ಅಬಕಾರಿ ಕಾಯ್ದೆ 1965 ರಡಿ ಕಾರ್ಯಾಚರಿಸುತ್ತಿರುವ ಸನ್ನದು ಆವರಣಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಹಾಗೂ ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಆದೇಶಿಸಿ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ಈ ನಿಷೇದಾಜ್ಞೆ ಅವಧಿಯಲ್ಲಿ ವೈನ್ ಶಾಪ್ ಮತ್ತು ಬಾರ್'ಗಳ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಸೀಲುಗಳನ್ನು ಕಡ್ಡಾಯವಾಗಿ ಹಾಕಿ, ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಬಕಾರಿ ಇಲಾಖೆಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.