ಕುಲಶೇಖರ,ಸೆ 1 (Daijiworld News/RD): ನಗರದ ಕುಲಶೇಖರದಲ್ಲಿ ರೈಲ್ವೇ ಹಳಿಯ ಮೇಲೆ ಮಣ್ಣು ಕುಸಿತಗೊಂಡ ಕಾರಣದಿಂದಾಗಿ ಕಳೆದ 8 ದಿನಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಮತ್ತೆ ಆರಂಭಗೊಂಡಿದೆ. ಆ ಭಾಗದಲ್ಲಿ ಪರ್ಯಾಯ ಹಳಿಯನ್ನು ಕಲ್ಪಿಸಿ ರೈಲು ಸೇವೆ ಪುನರಾರಂಭಗೊಂಡಿದೆ ಎಂದು ದಕ್ಷಿಣ ರೈಲ್ವೇ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಮಂಗಳೂರು ಜಂಕ್ಷನ್ನಿಂದ ಪಣಂಬೂರು ವರೆಗೆ ಈ ಮಾರ್ಗದಲ್ಲಿ ಸರಕು ಬೋಗಿಗಳನ್ನು ಓಡಿಸಲಾಯಿತು. ಶನಿವಾರ ಬೆಳಗ್ಗೆ ಮುಂಬಯಿ- ಮಂಗಳೂರು ಮತ್ಸ್ಯಗಂಧ ಎಕ್ಸ್ಪ್ರೆಸ್ (ನಂ.12620) ಸುರತ್ಕಲ್ ವರೆಗೆ ಬಂದು ವಾಪಸಾಗಿತ್ತು. ಮಂಗಳೂರು ಜಂಕ್ಷನ್ – ಮುಂಬಯಿ ಸಿಎಸ್ಎಂಟಿ ಎಕ್ಸ್ಪ್ರೆಸ್ (ನಂ.12134) ಪ್ರಯಾಣವೂ ಮಂಗಳೂರು ಜಂಕ್ಷನ್, ಸುರತ್ಕಲ್ ನಡುವೆ ರದ್ದುಗೊಂಡಿತ್ತು. ಈ ಮಧ್ಯೆ ಎರಡೂ ಭಾಗಗಳಿಂದ ಪ್ರಯಾಣಿಸುವ ಕುರ್ಲಾ- ತಿರುವನಂತಪುರ ಎಕ್ಸ್ಪ್ರೆಸ್ಗಳ ಸುಮಾರು 2,000ದಷ್ಟು ಪ್ರಯಾಣಿಕರ ಸಂಪರ್ಕಕ್ಕಾಗಿ 30 ಬಸ್ಗಳ ಸೇವೆಯನ್ನು ಕೊಂಕಣ ರೈಲ್ವೇ ವಿಭಾಗ ಅನವು ಮಾಡಿತ್ತು.
ನಿಜಾಮುದ್ದೀನ್ (ಹೊಸದಿಲ್ಲಿ)- ಎರ್ನಾಕುಳಂ ಮಂಗಳಾ ಲಕ್ಷದ್ವೀಪ ಎಕ್ಸ್ಪ್ರೆಸ್ ನಂ. 12618 ಪ್ರಯಾಣಿಕರ ರೈಲು ಶನಿವಾರ ಸಂಜೆ ಹೊಸ ಹಳಿ ಯಲ್ಲಿ ಸಂಚರಿಸಿತು. 450 ಮೀ. ಉದ್ದದ ರೈಲ್ವೇ ಹಳಿ ನಿರ್ಮಾಣವಾಗಿದ್ದು ಸಂಚಾರಕ್ಕೆ ಅನುಕೂಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.