ಉಡುಪಿ,ಸೆ 1 (Daijiworld News/RD): ಗೌರಿ, ಗಣೇಶ ಹಬ್ಬವನ್ನು ಆಚರಿಸಲು ಸಕಲ ರೀತಿಯಲ್ಲೂ ಸಿದ್ದತೆ ನಡೆಯುತ್ತಿದ್ದು, ಉಡುಪಿಯ ರಥಬೀದಿಯಲ್ಲಂತೂ ಹಬ್ಬದ ಕಳೆ ಇನ್ನಷ್ಟು ರಂಗೇರಿದೆ. ಚೌತಿಯ ಮುನ್ನ ಗೌರಿ ಪೂಜೆ ಮಾಡುವ ಸಂಪ್ರದಾಯವಿದ್ದು ಇಂದು ಮನೆ ಮನೆಗಳಲ್ಲಿ ಮಹಿಳೆಯರು ಗೌರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ಗೌರಿಯ ಸ್ವಾಗತಕ್ಕೆ ಬೇಕಾದ ಪೂಜಾ ವಸ್ತುಗಳು, ಸಿಹಿ ಖಾದ್ಯಗಳನ್ನು ಭರದಿಂದ ಕೊಂಡುಕೊಳ್ಳುವ ದೃಶ್ಯ ಎಲ್ಲೆಡೆ ಕಂಡುಬಂದಿದೆ.
ಇನ್ನು ಗಣಪನ ವಿಗ್ರಹ ಮಾಡುವವರು ಮೂರ್ತಿಗೆ ಕೊನೆಯ ಹಂತದ ಬಣ್ಣವನ್ನು ಹಚ್ಚಿ, ಅಲಂಕರಿಸಿ ಗ್ರಾಹಕರ ಬರುವಿಕೆಗಾಗಿ ಕಾದು ಕುಳಿತ್ತಿದ್ದಾರೆ. ಗಜ ಕೇಸರಿ, ಸಿಂದೂರ ಗಣಪ, ಭಾಲಗಣಪ, ಹೀಗೆ ವಿವಿಧ ಭಂಗಿಯಲ್ಲಿ ಕುಳಿತ ಮೂರ್ತಿ ಅಂಗಡಿಗಳಲ್ಲಿ ರಾರಾಜಿಸುತ್ತಿದೆ. ಜೊತೆಗ ಜನರು ಗಣಪನಿಗೆ ಪ್ರಿಯವಾದ ಕಬ್ಬು, ಹೂವು, ಕಡುಬು, ಅಲಂಕಾರದ ಸಾಮಾನುಗಳನ್ನು ಖರೀದಿಸುವಲ್ಲಿ ಎಲ್ಲರೂ ಬ್ಯೂಸಿಯಾಗಿದ್ದಾರೆ. ಸಾರ್ವಜನಿಕ ಗಣೇಶೋತ್ಸವವನ್ನು ಇಡುವಲ್ಲಿ ಅಬ್ಬರದ ವೇದಿಕೆ ಸಿದ್ದವಾಗಿದ್ದು ರಸ್ತೆ ಇಡೀ ಕಲರ್ ಪುಲ್ ವಿದ್ಯುತ್ ಲೈಟ್ಸ್ ಗಳಿಂದ ಅಲಂಕಾರ ಮಾಡಲಾಗಿದೆ. ಇನ್ನು ಭಕ್ತರು ವಿಘ್ನ ನಿವಾರಕ ಗಣಪತಿಯನ್ನು ತಮ್ಮ ತಮ್ಮ ಮನೆಗೆ ತರಲು ಕ್ಷಣಗಣನೆ ನಡೆಸುತ್ತಿದ್ದಾರೆ.
ಇನ್ನು ಈ ದಿನ ಲಂಬೋಧರನಿಗೆ ಪ್ರಿಯವಾದ ಕಬ್ಬಿಗೆ ಹೆಚ್ಚು ಬೇಡಿಕೆ ಇದ್ದು, ರಾಶಿ ರಾಶೀ ಕಬ್ಬು ಗಳು ದಂಡುಗಳು ರಥಬೀದಿಯ ಸುತ್ತ ಕಾಣ ಸಿಗುತ್ತದೆ. ಬಲು ಅಪರೂಪವಾದ ಕಡುಬು ಎಲೆಗೆ ಈ ದಿನದಂದು ಹೆಚ್ಚು ಬೇಡಿಕೆ ಇದ್ದು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಮಕ್ಕಳು ಕೂಡ ಬಾಲ ಗಣಪನನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ.