ಮಂಗಳೂರು ಡಿ 25: ಗೂಢಾಚಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಪಾಕಿಸ್ಥಾನದ ಜೈಲಿನಲ್ಲಿರುವ ಭಾರತದ ಮಾಜಿ ನೌಕಾಧಿಕಾರಿ ಕುಲ್ಭೂಷಣ್ ಜಾದವ್ ಆವರನ್ನು ಇಂದು ಆವರ ತಾಯಿ ಮತ್ತು ಪತ್ನಿ ಇಸ್ಲಾಮಾಬಾದ್ನಲ್ಲಿ ಭೇಟಿ ಮಾಡಿ ಸುಮಾರು ಆರ್ಧತಾಸು ಮಾತುಕತೆ ಮಾಡಿದರು. ಆ ಮೂಲಕ, ಕಳೆದ ಒಂದು ವರ್ಷದಿಂದ ಪಾಕ್ ಜೈಲ್ನಲ್ಲಿದ್ದು, ಮರಣದಂಡನೆಗೆ ಗುರಿಯಾಗಿರುವ ಕುಲ್ ಭೂಷಣ್ ಜಾದವ್ಗೆ ಇದೇ ಮೊದಲ ಬಾರಿಗೆ ತನ್ನ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ಲಭಿಸಿದೆ.
ಕುಲ್ಭೂಷಣ್ ತಾಯಿ ಅವಂತಿ ಜಾದವ್ ಹಾಗೂ ಪತ್ನಿ ಚೇತನ್ಕುಲ್ ಜಾದವ್ ಅವರು ಪಾಕಿಸ್ಥಾನದಲ್ಲಿರುವ ಭಾರತೀಯ ರಾಯಭಾರಿ ಆಧಿಕಾರಿಗಳೊಂದಿಗೆ ಇಸ್ಲಾಮಬಾದ್ನಲ್ಲಿರುವ ಪಾಕಿಸ್ಥಾನದ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಬಿಗಿ ಭದ್ರತೆಯಲ್ಲಿ ಕುಲ್ಭೂಷಣ್ ಅವರನ್ನು ಭೇಟಿ ಮಾಡಿ ಸುಮಾರು 30 ನಿಮಿಷ ಪರಸ್ಪರ ಮಾತನಾಡುವುದಕ್ಕೆ ಅವಕಾಶ ಕಲ್ಪಿಸಲಾಯಿತು.
ಕುಲ್ಭೂಷಣ್ ಅವರ ತಾಯಿ ಹಾಗೂ ಪತ್ನಿ ಸೋಮವಾರ ಬೆಳಗ್ಗೆ ದುಬೈಯಿಂದ ವಿಮಾನದಲ್ಲಿ ಇಸ್ಲಾಮಾಬಾದ್ಗೆ ಬಂದಿದ್ದು, ಮಧ್ಯಾಹ್ನದ ಹೊತ್ತಿಗೆ ಈ ಐತಿಹಾಸಿಕ ಭೇಟಿ ನಡೆದಿದ್ದು, ಇದೇದಿನ ಅವರಿಬ್ಬರು ಪಾಕಿಸ್ಥಾನದಿಂದ ನಿರ್ಗಮಿಸಿ ಒಮಾನ್ ಮೂಲಕ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ಪಾಕ್ ವಿದೇಶಾಂಗದ ಕಾರ್ಯಾಲಯ ತಿಳಿಸಿದೆ.
ಗಲ್ಲು ಶಿಕ್ಷೆಗೆ ಗುರಿಯಾಗಿರುವ ತಮ್ಮ ಮಗನನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡಿರುವುದಕ್ಕೆ ಪಾಕಿಸ್ಥಾನದ ಸರ್ಕಾರಕ್ಕೆ ಕುಲ್ಭೂಷಣ್ ತಾಯಿ ಈ ವೇಳೆ ಧನ್ಯವಾದ ಹೇಳಿದ್ದಾರೆ.
ಕುಲ್ಭೂಷಣ್ ಜಾದವ್ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಾಕಿಸ್ಥಾನದ ಭದ್ರತಾ ಪಡೆಯು ಬಲೂಚಿಸ್ಥಾನ್ನಲ್ಲಿ ಬಂಧಿಸಿರುವುದಾಗಿ ಪಾಕ್ ಈಗಾಗಲೇ ಹೇಳಿಕೊಂಡಿತ್ತು. ಆದರೆ, ಭಾರತವು ಪಾಕ್ ಆರೋಪವನ್ನು ತಳ್ಳಿ ಹಾಕಿದ್ದು, ಕುಲ್ಭೂಷಣ್ ಅವರನ್ನು ಇರಾನ್ನಿಂದ ಅಪಹರಿಸಲಾಗಿದ್ದು, ಅಕ್ರಮವಾಗಿ ಪಾಕ್ ಜೈಲಿನಲ್ಲಿ ಇಡಲಾಗಿದೆ ಎಂದು ಹೇಳಿದೆ.