ಕಾಸರಗೋಡು, ಸೆ 01(DaijiworldNews/SM): ಮಂಜೇಶ್ವರ ಅವರ್ ಲೇಡಿ ಆಫ್ ಮೆರ್ಸಿ ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಎರಡು ವಾರಗಳು ಕಳೆದರು ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಆದರೆ, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಬಂಧಿಸುತ್ತೇವೆ ಎಂಬ ಮಾತು ಮಾತ್ರ ತನಿಖಾ ತಂಡದಿಂದ ಲಭಿಸುತ್ತಿದೆ.
ಘಟನೆ ನಡೆದು ಎರಡು ವಾರಗಳಾಗುತ್ತಾ ಬಂದರೂ ತನಿಖೆ ಪ್ರಗತಿ ಕಂಡಿಲ್ಲ. ಸ್ಥಳೀಯ ಪೊಲೀಸರಿಂದ ಹಿಡಿದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ತನಕ ದೂರು ಸಲ್ಲಿಸಿದ್ದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಆಗಸ್ಟ್ 19ರಂದು ಮುಂಜಾನೆ ಚರ್ಚ್ ಮೇಲೆ ದಾಳಿ ನಡೆದಿತ್ತು. ಬೈಕಿನಲ್ಲಿ ಬಂದ ಓರ್ವ ಮುಸುಕುಧಾರಿ ಚರ್ಚ್ ಆವರಣದೊಳಗೆ ನುಗ್ಗಿ ಚರ್ಚಿನ ಮುಂಭಾಗದ ಗಾಜುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು ಈ ದೃಶ್ಯ ಚರ್ಚಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಆದರೆ ಎರಡು ವಾರಗಳಾದರೂ ಆರೋಪಿಗಳ ಬಂಧನ ವಿಳಂಬವಾಗುತ್ತಿರುವುದು ಸಂಶಯ ಹಾಗೂ ಪ್ರತಿಭಟನೆಗೆ ಕಾರಣವಾಗುತ್ತಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಮಾತ್ರವಲ್ಲ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಬೇಡಡ್ಕ ಸರ್ಕಲ್ ಇನ್ಸ್ಪೆಕ್ಟರ್ ಉತ್ತಮ್ ದಾಸ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.
ಘಟನೆ ಬಗ್ಗೆ ಚರ್ಚಿನ ಧರ್ಮಗುರು ಫಾದರ್ ವಿನ್ಸೆಂಟ್ ಸಲ್ಡಾನ ರವರ ನೇತೃತ್ವದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆಗೆ ವಿಶೇಷ ತಂಡ ರಚಿಸಿ ಶೀಘ್ರ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ನೀಡಿದ್ದರು. ಆದರೆ ದಿನಗಳು ಕಳೆದರೂ ಈ ಬಗ್ಗೆ ಬಗ್ಗೆ ಸುಳಿಯು ಕೂಡ ಪತ್ತೆಹಚ್ಚಲು ಪೋಲಿಸರಿಗೆ ಸಾಧ್ಯವಾಗಿಲ್ಲ. ಆರೋಪಿಗಳ ಬಂಧನ ವಿಳಂಬವನ್ನು ಖಂಡಿಸಿ ಕ್ಯಾಥೋಲಿಕ್ ಸಭಾದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆಗಸ್ಟ್ 25ರಂದು ಮಂಜೇಶ್ವರದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.