ವಿಟ್ಲ, ಸೆ 03 (DaijiworldNews/SM): ಹೊಳೆಗ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧರೊಬ್ಬರನ್ನು ವಿಟ್ಲದ ಒಕ್ಕೆತ್ತೂರು ಯುವಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ವಿಟ್ಲದ ಒಕ್ಕೆತ್ತೂರಿನಲ್ಲಿ ನಡೆದಿದೆ. ಮಂಗಳೂರು ಸಮೀಪದ ಮಂಗಳಾದೇವಿ ನಿವಾಸಿಯಾದ ಕೃಷ್ಣ(65) ರಕ್ಷಣೆಗೊಳಗಾದ ವ್ಯಕ್ತಿ.
ಇವರು ಕಳೆದು ಮೂವತ್ತು ವರ್ಷದಿಂದ ತನ್ನ ಕುಟುಂಬದವರಿಂದ ದೂರವಾಗಿದ್ದರು. ವಿವಿಧೆಡೆ ಅಲೆದಾಡುತ್ತಾ ಜೀವನ ನಡೆಸುತ್ತಿದ್ದರು. ಪ್ರಸ್ತುತ ಪೆರುವಾಯಿ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಪ್ಪತ್ತು ದಿನದಿಂದ ಅಲ್ಲಿಗೂ ಕೆಲಸಕ್ಕೆ ಹೋಗುತ್ತಿರಲಿಲ್ಲ.
ಮಧ್ಯಾಹ್ನದ ವೇಳೆಗೆ ಕೈಕಾಲು ತೊಳೆಯಲು ಒಕ್ಕೆತ್ತೂರು ಹೊಳೆಗೆ ಇಳಿದಿದ್ದರು. ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಬಗ್ಗೆ ಗಮನಿಸಿದ ಒಕ್ಕೆತ್ತೂರು ಯುವಕರು ಅವರನ್ನು ರಕ್ಷಿಸಿದ್ದಾರೆ. ಬಳಿಕ ಅವರನ್ನು ಫ್ರೆಂಡ್ಸ್ ವಿಟ್ಲ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.