ಪುತ್ತೂರು,ಸೆ 2 (Daijiworld News/RD): ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಾವು ಸಮೀಪದ ಮಡ್ಯಂಗಲ ಎಂಬಲ್ಲಿ, ರಸ್ತೆ ಬದಿಯಲ್ಲಿರುವ ಕೆರೆಯೊಂದಕ್ಕೆ ಕಾರೊಂದು ಬಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಸೆ 2 ರ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.
ಮುಂಜಾನೆ ಸುಮಾರು 07.30 ಗಂಟೆಗೆ ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಕೆರೆಗೆ ಬಿದ್ದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶುಂಠಿಕೊಪ್ಪ ಮೂಲದ ಅಶೋಕ್ ( 48 ವರ್ಷ), ಹೆಂಡತಿ ಹೇಮಲತಾ, ಮಗ ಯಶಸ್, ಮಗಳು ವರ್ಷ ಎಂಬವರುಗಳು ಮೃತಪಟ್ಟಿರುತ್ತಾರೆ. ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ರಸ್ತೆ ಬದಿಯಲ್ಲಿರುವ ಈ ಕೆರೆಯು ತೀರಾ ಅಪಾಯಕಾರಿಯಾಗಿದ್ದು, ಇದನ್ನು ಮುಚ್ಚುವಂತೆ ಸಾರ್ವಜನಿಕರಿಂದ ಈ ಹಿಂದೆ ಒತ್ತಾಯ ಕೇಳಿ ಬಂದಿತ್ತು. ಅದರೆ ಈ ಕೆರೆಗೆ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದು ಅವರು ಮುಚ್ಚಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಇದೀಗ ನಾಲ್ಕು ಜೀವಗಳನ್ನು ಕೆರೆ ಬಲಿ ಪಡೆದುಕೊಂಡಿದೆ ಎಂದು ಸ್ಥಳಿಯರು ಅಭಿಪ್ರಾಯಪಟ್ಟರು.