ಮಂಗಳೂರು, ಸೆ 2 (Daijiworld News/RD): ನಗರದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ‘ರಾಣಿ’ ಹುಲಿ 5 ಮರಿಗಳಿಗೆ ಜನ್ಮ ನೀಡಿದೆ. ಜೊತೆಗೆ ಇದರ ಬೆನ್ನಲ್ಲೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಹುಲಿಗಳ ಗಣತಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಏರಿದೆ.
8 ವರ್ಷದ ರಾಣಿಗೆ 3 ಹೆಣ್ಣು ಹಾಗೂ 2 ಗಂಡು ಮರಿಗಳ ಜನನವಾಗಿದೆ.ಉದ್ಯಾನವನಗಳಲ್ಲಿ ಹುಲಿಗಳು 2ರಿಂದ 3 ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ರಾಣಿ 5 ಮರಿ ಹಾಕಿರುವುದು ನಿಸರ್ಗಧಾಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಚ್ಚರಿ ಉಂಟುಮಾಡಿದೆ. ಸದ್ಯ ತಾಯಿ ಹಾಗೂ ಮರಿಗಳನ್ನು ಬೋನಿನಲ್ಲಿಡಲಾಗಿದ್ದು, ಅವುಗಳಿಗೆ ಸೋಂಕು ತಗಲದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇಲ್ಲ. ಎರಡ್ಮೂರು ತಿಂಗಳ ಬಳಿಕ ಮರಿಗಳಿಗೆ ಚುಚ್ಚು ಮದ್ದು, ಲಸಿಕೆ ನೀಡಿ ಆರೋಗ್ಯ ಪರಿಶೀಲಿಸಿ ಬೋನಿನಿಂದ ಹೊರಕ್ಕೆ ಬಿಡಲಾಗುವುದು ಎಂಬುದಾಗಿ ನಿಸರ್ಗಧಾಮ ಅಧಿಕಾರಿಗಳು ತಿಳಿಸಿದ್ದಾರೆ. ರಾಣಿಯನ್ನು 3 ವರ್ಷಗಳ ಹಿಂದೆ ಬೆಂಗಳೂರಿನ ಬನ್ನೇರುಘಟ್ಟದಿಂದ ತರಲಾಗಿತ್ತು. ಇದೀಗ ಮೂರು ವಾರಗಳ ಹಿಂದೆಯಷ್ಟೇ ರಾಣಿಗೆ 5 ಮರಿಗಳು ಜನಿಸಿವೆ.
ವಿಶ್ವ ಹುಲಿ ದಿನವಾದ ಜುಲೈ 29ರಂದು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದ ಹುಲಿಗಳ ಗಣತಿಯಲ್ಲಿ 526 ಹುಲಿಗಳನ್ನು ಹೊಂದಿದ್ದ ಮಧ್ಯಪ್ರದೇಶವು ಟಾಪ್ ಒನ್ ಸ್ಥಾನಕ್ಕೆ ಏರಿತ್ತು. ಹೀಗಾಗಿ 524 ಹುಲಿಗಳನ್ನು ಹೊಂದಿದ್ದ ಕರ್ನಾಟಕ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಈಗ ಕರ್ನಾಟಕದ ಹುಲಿಗಳ ಸಂಖ್ಯೆ 524+5 ಸೇರಿ 529 ಆಗಿದೆ. ಈ ಮೂಲಕ ಕರ್ನಾಟಕ ಮತ್ತೆ ಅಗ್ರಸ್ಥಾನಕ್ಕೆರಿದೆ.