ಕಾಸರಗೋಡು, ಸೆ 02 (DaijiworldNews/SM): ಸರಕಾರಿ ಜನರಲ್ ಆಸ್ಪತ್ರೆಯ ವೈದ್ಯರ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸದಿರುವುದನ್ನು ಹಾಗೂ ವೈದ್ಯರ ವಿರುದ್ಧ ಹೂಡಿರುವ ಸುಳ್ಳು ಮೊಕದ್ದಮೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಜನರಲ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸೋಮವಾರ ಕರ್ತವ್ಯಕ್ಕೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕೇರಳ ಸರಕಾರಿ ವೈದ್ಯರ ಸಂಘಟನೆ ಮತ್ತು ಜನರಲ್ ಆಸ್ಪತ್ರೆಯ ಸ್ಟಾಫ್ ಕೌನ್ಸಿಲ್ ನೇತೃತ್ವದಲ್ಲಿ ಧರಣಿ ಮತ್ತು ಪ್ರತಿಭಟನೆ ನಡೆಸಲಾಯಿತು. ಧರಣಿಯನ್ನು ವೈದ್ಯರ ಸಂಘಟನೆಯ ರಾಜ್ಯ ಮುಖಂಡ ಡಾ. ಕೇಶವ ಉದ್ಘಾಟಿಸಿದರು. ಉಪಾಧ್ಯಕ್ಷ ಡಾ. ಬಿ. ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ವೈದ್ಯರ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಅನಿರ್ಧಿಷ್ಟಾವಧಿ ಪ್ರತಿಭಟನೆಯ ಮುನ್ನೆಚ್ಚರಿಕೆ ನೀಡಿದರು.