ಸುಬ್ರಹ್ಮಣ್ಯ, ಸೆ 03 (Daijiworld News/MSP): ಕೋಟೇಶ್ವರದಲ್ಲಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥ ನಿರ್ಮಾಣ ಭರದಿಂದ ಸಾಗುತ್ತಿದ್ದು, ನವರಾತ್ರಿಯ ಮೊದಲ ದಿನ ಸೆ.29 ರಂದು ಚಿತ್ರಾ ನಕ್ಷತ್ರ ಮುಹೂರ್ತದಲ್ಲಿ ಶಿಲ್ಪಿಗಳಿಂದ ರಥ ಹಸ್ತಾಂತರ ಕಾರ್ಯ ನಡೆಯಲಿದೆ.
ಅಕ್ಟೋಬರ್ ನಲ್ಲಿ 3 ರಂದು ರಥ ಸುಬ್ರಹ್ಮಣ್ಯ ತಲುಪಲಿದೆ. ಚಂಪಾ ಷಷ್ಠಿ ಸಂದರ್ಭ ಎಳೆಯುವ 400 ವರ್ಷಗಳ ಇತಿಹಾಸವಿರುವ ಬ್ರಹ್ಮರಥ ಶಿಥಿಲವಾಗಿದ್ದು, ನೂತನ ರಥ ನಿರ್ಮಿಸುವುದು ಸೂಕ್ತ ಎಂಬುದಾಗಿ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿತ್ತು. ಬಿಡದಿ ರಿಯಾಲಿಟಿ ವೆಂಚರ್ ಪ್ರೋರ್ ಗ್ರೂಪ್ ಸಂಸ್ಥೆಯ ಪಾಲುದಾರರಾದ ಉದ್ಯಮಿ ಮುತ್ತಪ್ಪ ರೈ ಹಾಗೂ ಅಜಿತ್ ರೈ ಅವರು 2 ಕೋಟಿ ರೂ.ವೆಚ್ಚದ ಬ್ರಹ್ಮರಥವನ್ನು ದಾನ ರೂಪದಲ್ಲಿ ನೀಡುತ್ತಿದ್ದಾರೆ.
ಈಗಿರುವ ಬ್ರಹ್ಮರಥವನ್ನು 400 ವರ್ಷಗಳ ಹಿಂದೆ (ಕ್ರಿ.ಶ. 1582-1629) ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿ ಕೊಟ್ಟಿದ್ದ ಎಂದು ದಾಖಲೆಯಿಂದ ತಿಳಿಯುತ್ತದೆ. 1923ರಲ್ಲಿ ಗಣಪತಿ ರಾವ್ಗಳ ದ.ಕ.ಜಿಲ್ಲೆಯ ಪ್ರಾಚೀನ ಇತಿಹಾಸ ದಾಖಲೆಯಲ್ಲಿ ಈ ಕುರಿತು ಉಲ್ಲೇಖವಿದೆ. ಇದೇ ಅವಧಿಯಲ್ಲಿ ವೆಂಕಟಪ್ಪ ನಾಯಕ ಕೊಟೇಶ್ವರ ದೇಗುಲಕ್ಕೂ ರಥ ನೀಡಿರುವುದಾಗಿ ಗ್ರಂಥದಲ್ಲಿ ಉಲ್ಲೇಖವಿದೆ.
ಕೋಟೇಶ್ವರದಿಂದ -ಉಡುಪಿ - ಮಂಗಳೂರು - ಉಪ್ಪಿನಂಗಡಿ - ಕಡಬ ಮಾರ್ಗವಾಗಿ ಕ್ಷೇತ್ರಕ್ಕೆ ಆಗಮಿಸಲಿದೆ. ಬೃಹತ್ ಟ್ರಾಲಿ ಮೂಲಕ ಆಗಮಿಸುವ ನೂತನ ಬ್ರಹ್ಮರಥ ಅ.೩ ರಂದು ಕ್ಷೇತ್ರವನ್ನು ತಲುಪಲಿದೆ. ಗಾಟದ ಹೊಣೆಯನ್ನು ಮಾಜಿ ಮುಜರಾಯಿ ಸಚಿವ ನಾಗರಾಜಶೆಟ್ಟಿ ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ.
ರಾಷ್ಟ್ರೀಯ ಶಿಲ್ಪ ಗುರು ಪ್ರಶಸ್ತಿಗೆ ಪಾತ್ರರಾಗಿರುವ, ಈವರೆಗೆ 102 ರಥಗಳನ್ನು ನಿರ್ಮಿಸಿರುವ ಕುಂದಾಪುರ ತಾಲೂಕು ಕೋಟದ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರಿಗೆ ರಥ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.