ಮಂಗಳೂರು, ಡಿ 26: ಕರಾವಳಿ ಕೋಮು ಸೂಕ್ಷ್ಮ ಪ್ರದೇಶ. ಇದೀಗ ಭಿನ್ನ ಕೋಮಿನ ಪ್ರೇಮಿಗಳ ಮೇಲೆ ಕಣ್ಣು ಇಡಲು ಕರಾವಳಿಯಲ್ಲಿ ಹೊಸ ಕಾರ್ಯಪಡೆಯೊಂದು ಸಜ್ಜಾಗಿದೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದೆ ಅನ್ನುವ ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಮೂಡಬಿದ್ರೆ ನಿವಾಸಿ ಪ್ರಿಯಾಂಕ ಪ್ರಕರಣ. ಈ ಪ್ರಕರಣದಿಂದ ಹಿಡಿದು ಇಲ್ಲಿ ಅನೇಕ ಭಿನ್ನ ಕೋಮಿನ ಪ್ರೇಮಿಗಳ ನಡುವೆ ಹಲವು ಪ್ರಕರಣಗಳು ವರದಿಯಾಗಿದೆ.
ಸದ್ಯ ಇಂತಹ ಲವ್ ಜಿಹಾದ್ ನಿಂದ ಹಿಂದು ಯುವತಿಯರು ಮೋಸ ಹೋಗದಂತೆ ತಡೆಯುವುದಕ್ಕೆ ಕರಾವಳಿಯಲ್ಲಿ ಟಾಸ್ಕ್ ಫೋರ್ಸ್ ನಿರ್ಮಾಣವಾಗುತ್ತಿದೆ. ಮುಸ್ಲಿಂ ಯುವಕರು ಹಿಂದೂ ಯುವತಿಯನ್ನು ಪ್ರೇಮದ ಹೆಸರಿನಲ್ಲಿ ಲವ್ ಜಿಹಾದ್ ಮಾಡುತ್ತಿದ್ದಾರೆ ಅನ್ನುವುದು ಹಿಂದೂ ಪರ ಸಂಘಟನೆಗಳ ವಾದ. ಈ ಕಾರಣಕ್ಕಾಗಿ ಲವ್ ಜಿಹಾದ್ ತಡೆಗೆ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಹಿಂದೂ ಟಾಸ್ಕ್ ಫೋರ್ಸ್ ರಚನೆಯಾಗಲಿದೆ.
ಈ ಟಾಸ್ಕ್ ಫೋರ್ಸ್ ನಲ್ಲಿ ವಕೀಲರು, ಮನಶಾಸ್ತ್ರಜ್ಷರು, ಸಾಮಾಜಿಕ ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಗಳ ಯುವಕ ಯುವತಿಯರು ಇರಲಿದ್ದು, ಭಿನ್ನ ಧರ್ಮೀಯ ಪ್ರೇಮಿಗಳ ಮೇಲೆ ಈ ಕಾರ್ಯಪಡೆ ಕಣ್ಣಿಡಲಿದೆ. ಅಂತಹ ಜೋಡಿ ಕಂಡು ಬಂದಲ್ಲಿ ಅವರನ್ನು ಮನಪರಿವರ್ತನೆ ಮಾಡುವ ಮೂಲಕ ಬೇರ್ಪಡಿಸುವುದು ಈ ಟಾಸ್ಕ್ ಫೋರ್ಸ್ ಉದ್ದೇಶ. ಇದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.