ಕಾಸರಗೋಡು, ಸೆ 03 (DaijiworldNews/SM): ಹದಗೆಟ್ಟ ರಸ್ತೆಯನ್ನು ದುಸ್ಥಿತಿಗೊಳಿಸುವಂತೆ ಒತ್ತಾಯಿಸಿ ಬುಧವಾರ ನಡೆಸಲುದ್ದೇಶಿಸಿದ್ದ ಖಾಸಗಿ ಬಸ್ಸು ಮುಷ್ಕರವನ್ನು ಹಿಂತೆಗೆದುಕೊಂಡಿರುವುದಾಗಿ ಬಸ್ ಮಾಲಕರ ಸಂಘ ತಿಳಿಸಿದೆ.
ಜಿಲ್ಲೆಯ ಬಹುತೇಕ ಎಲ್ಲ ರಸ್ತೆಗಳು ಕೊಚ್ಚಿಹೋಗಿದ್ದು ಕೂಡಲೇ ಈ ರಸ್ತೆಗಳನ್ನು ಸಂಚಾರಯೋಗ್ಯಗೊಳಿಸಬೇಕು. ಸಮಯ ಪಾಲಿಸದ ಕೆಎಸ್ ಆರ್ ಟಿಸಿ ಬಸ್ಸುಗಳನ್ನು ಹಿಂತೆಗೆದುಕೊಳ್ಳಬೇಕು. ಖಾಸಗಿ ಬಸ್ಸು ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ರಿಯಾಯಿತಿಯನ್ನು ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ನೀಡಬೇಕು. ಖಾಸಗಿ ವಾಹನಗಳ ಸಮಾನಾಂತರ ಸಂಚಾರವನ್ನು ತಡೆಗಟ್ಟಬೇಕು. ಡೀಸೆಲ್ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕು ಮೊದಲಾದ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬುಧವಾರ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಹಾಗೂ ಧರಣಿ ನಡೆಸಲು ತೀರ್ಮಾನಿಸಲಾಗಿತ್ತು.
ಆದರೆ, ಮಂಗಳವಾರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾಲಕರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಲಭಿಸಿದ ಹಿನ್ನಲೆಯಲ್ಲಿ ಮುಷ್ಕರ ಹಿಂತೆಗೆದುಕೊಂಡಿರುವುದಾಗಿ ಬಸ್ಸು ಮಾಲಕರ ಸಂಘದ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.