ಉಡುಪಿ, ಸೆ 03 (DaijiworldNews/SM): ಪುಟ್ಟ ಮಕ್ಕಳು ಏನೇ ಮಾಡಿದರೂ ಒಂದು ಹಂತದಲ್ಲಿ ಮುದ್ದು ಮುದ್ದಾಗಿರುತ್ತದೆ. ಪುಟ್ಟ ಮಕ್ಕಳ ತುಂಟಾಟಗಳನ್ನು ನೋಡುವುದೇ ಚಂದ. ಆದರೆ, ಮೊಬೈಲ್, ವೀಡಿಯೋ ಗೇಮ್ ಗಳಾ ಎಂಟ್ರಿಯಾದ ಬಳಿಕ ಪುಟಾಣಿಗಳೂ ಕೂಡ ತಮ್ಮ ತುಂಟತನವನ್ನು ನಿಲ್ಲಿಸಿ ಮೊಬೈಲ್ ನಲ್ಲೇ ಬ್ಯುಸಿಯಾಗಿದ್ದಾರೆ. ಇದಕ್ಕೆ ಅಪವಾದ ಎಂಬಂತೆ ಉಡುಪಿಯ ಶಾಸಕ ರಘಪತಿ ಭಟ್ ಹಾಗೂ ಪತ್ನಿ ಶಿಲ್ಪಾ ದಂಪತಿಯ ಮಗ ನಾಲ್ಕರ ಪೋರ ಸಾಧನೆಯೊಂದನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ. ನಾಲ್ಕು ವರ್ಷದ ಪುಟ್ಟ ಪೋರ ರೇಯಾಂಶ.ಆರ್.ಭಟ್ ತಾನು ಹರಿಕತೆಯನ್ನು ಹಾಡಿ ಪ್ರೇಕ್ಷಕರನ್ನು ಮನವನ್ನು ಗೆದ್ದಿದ್ದಾನೆ.
ಸೆಪ್ಟೆಂಬರ್ 3 ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತ ಹನುಮ ಕಥಾ ಭಾಗವನ್ನು ಹಾಡಿ ಎಲ್ಲರಿಂದ ಶಬ್ಬಾಸ್ ಗಿರಿ ಪಡೆದು ಕೊಂಡಿದ್ದಾನೆ. ಅಲ್ಲದೆ ಪಲಿಮಾರು ಪರ್ಯಾಯ ಮಠದ ಸ್ವಾಮೀಜಿಗಳಾದ ಶ್ರೀ ವಿದ್ಯಾದೀಶ ತೀರ್ಥರು ಈ ಪುಟ್ಟ ಪೋರನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಸನ್ಮಾನಿಸಿ ಆಶೀರ್ವಚಿಸಿದರು.ರಘುಪತಿ ಭಟ್ ದಂಪತಿಯೂ ಸೇರಿದಂತೆ ಬಾಲಕನ ಅಜ್ಜಿಯೂ ಮೊಮ್ಮಗನ ಕಲೆಯನ್ನು ಪ್ರೇಕ್ಷಕರಾಗಿ ಕುಳಿತು ಹರಿಕಥೆಯನ್ನು ಆಸ್ವಾದಿಸಿದರು.
ಆದೇನೆ ಆಗಲಿ ಎಲ್ಲಾ ರಾಜಕಾರಣಿಗಳ ಮಕ್ಕಳು ಓದು, ರಾಜಕೀಯ, ಸಿನಿಮಾ ಎಂದೆಲ್ಲಾ ವಿವಿಧ ರಂಗಗಳಲ್ಲಿ ಕೈಯಾಡಿಸುವುದನ್ನು ನಾವು ಕಂಡಿದ್ದೇವೆ. ಆದರೆ, ಉಡುಪಿ ಶಾಸಕ ರಘುಪತಿ ಭಟ್ಟ ತಮ್ಮ ಮಗನಿಗೆ ವಿಶೇಷವಾದ ಕಲೆಗೆ ಪ್ರೋತ್ಸಹ ನೀಡಿದ್ದು, ಕಲೆಯ ಮೇಲೆ ಅವರಿಗಿರುವ ಒಲವನ್ನು ತೋರಿಸುತ್ತದೆ. ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ಈ ಬಾಲಕನಿಗೆ ಹರಿಕಥೆಯ ಮೇಲೆ ಇರುವ ಆಸಕ್ತಿಯನ್ನು ಮೆಚ್ಚುವ ವಿಷಯವೇ ಸರಿ. ಇದು ಎಲ್ಲರಿಗೂ ಸ್ಪೂರ್ತಿ ದಾಯಕ ವಿಚಾರವಾಗಿದೆ.
ಪೋಷಕರಿಗೆ ತೊಂದರೆಯನ್ನುಂಟು ಮಾಡುತ್ತಾರೆ ಎಂಬು ಕಾರಣಕ್ಕಾಗಿ ಮಕ್ಕಳ ಕೈಗೆ ಮೊಬೈಲ್, ವೀಡಿಯೋ ಗೇಮ್ ನೀಡುವ ಬದಲು ಅವರಿಗೆ ಕಲೆಯನ್ನು ಉಣಬಡಿಸಿದರೆ, ಮುಂದೆ ನಮ್ಮ ನಿಮ್ಮ ಮಕ್ಕಳು ಇಂತಹ ಸಾಧನೆಗಳನ್ನು ಮಾಡುವುದರಲ್ಲಿ ಸಂಶಯವಿಲ್ಲ.