ಸುಬ್ರಹ್ಮಣ್ಯ, ಸೆ 04 (Daijiworld News/MSP): ಚಿಕಿತ್ಸೆಗೆಂದು ಪಂಜದ ವೈದ್ಯರ ಬಳಿಗೆಂದು ತೆರಳಿದ್ದ ವ್ಯಕ್ತಿಯೋರ್ವರು ಕೂತ್ಕುಂಜ ಗ್ರಾಮದ ಪಲ್ಲೋಡಿ ಹೊಳೆ ಪಾಲಾಗಿರುವ ಸಂಶಯ ವ್ಯಕ್ತವಾಗಿದ್ದು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳ, ಮುಳುಗು ತಜ್ಞರು ಆಗಮಿಸಿ ಹುಡುಕಾಟ ಆರಂಭಿಸಿದ್ದಾರೆ.
ನಾಪತ್ತೆಯಾಗಿರುವವರನ್ನು 72 ವರ್ಷದ ಸ್ಥಳೀಯ ನಿವಾಸಿ ಕುದ್ವ ಶೇಷಪ್ಪ ಗೌಡ ಎಂದು ಗುರುತಿಸಲಾಗಿದೆ. ಶೇಷಪ್ಪ ಅವರು ಸೆ. 03 ರ ಮಂಗಳವಾರ ಮಧ್ಯಾಹ್ನ ತನಗೆ ಜ್ವರ ಬರುತ್ತಿದ್ದು ವೈದ್ಯರ ಬಳಿ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಸಂಜೆಯಾದರೂ ಶೇಷಪ್ಪ ಅವರು ಮನೆಗೆ ಹಿಂತಿರುಗಿಲ್ಲವಾದ್ದರಿಂದ ಅವರ ಪುತ್ರ ಹರೀಶ್ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭ ಪಲ್ಲೋಡಿ ತೋಡಿನ ಕಾಲು ಸೇತುವೆ ಮೇಲೆ ಅಳವಡಿಸಿದ್ದ ಅಡ್ಡ ಮುರಿದುಬಿದ್ದನ್ನು ಗಮನಿಸಿ ನೆರೆಹೊರೆಯವರೆಲ್ಲರೂ ಹುಡುಕಾಟ ಆರಂಭಿಸಿದಾಗ ತೋಡಲ್ಲಿ ಅವರ ಒಂದು ಚಪ್ಪಲಿ ಪತ್ತೆಯಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸುಳ್ಯ ಕಂದಾಯ ನಿರೀಕ್ಷಕ ಶಂಕರ್ ಎಂ ಎ, ಪೋಲೀಸರು, ಗೃಹ ರಕ್ಷಕ ದಳದವರೊಂದಿಗೆ ರಾತ್ರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ರಾತ್ರಿ ಹುಡುಕಾಟಕ್ಕಾಗಿ ಜನರೇಟರ್ ಸಿದ್ದಪಡಿಸಲಾದರೂ ಬುಧವಾರ ಮುಂಜಾನೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬುಧವಾರ ಸ್ಥಳಕ್ಕೆ ಅಗ್ನಿಶಾಮಕ ದಳ, ಮುಳುಗು ತಜ್ಞರು ಆಗಮಿಸಿ ಹುಡುಕಾಟ ಆರಂಭಿಸಿದ್ದಾರೆ. ಬುಧವಾರ ಮಧ್ಯಾಹ್ನ ಸುಳ್ಯ ತಹಶೀಲ್ದಾರ್ ಕುಂಞ್ಞ ಅಹಮದ್ ಅವರು ಸ್ಥಳಕ್ಕೆಆಗಮಿಸಿ ಹುಡುಕಾಟ ಕಾರ್ಯದ ಬಗ್ಗೆ ಮಾಹಿತಿ ಪಡೆದರು.