ಮಂಗಳೂರು ಡಿ 26: ವಿಜಯಪುರದಲ್ಲಿ ನಡೆದ ಅಪ್ರಾಪ್ತ ಬಾಲಕಿ ದಲಿತ ವಿದ್ಯಾರ್ಥಿನಿ ದಾನಮ್ಮ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಎಸ್ಸಿ ಮೋರ್ಚಾ ಒತ್ತಾಯಿಸಿದೆ. ಡಿ 26 ರಂದು ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು ಅವರು 14 ವರ್ಷ ವಯಸ್ಸಿನ ದಲಿತ ವಿದ್ಯಾರ್ಥಿನಿ ಮೇಲೆ ನಡೆದ ದೌರ್ಜನ್ಯ ದೆಹಲಿಯ ನಿರ್ಭಯ ಪ್ರಕರಣವನ್ನೇ ಹೋಲುತ್ತದೆ. ಆರು ಜನ ಯುವಕರು ಆ ಪುಟ್ಟ ಬಾಲೆಯನ್ನು ಏಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದು ಹೇಯ ಮತ್ತು ಖಂಡನೀಯ. ಇಂತಹ ಅಪರಾಧಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ಗೃಹ ಸಚಿವ ರಾಮಲಿಂಗ ರೆಡ್ಡಿ ಸತ್ಯವನ್ನು ಮರೆಮಾಚಿ ವಿದ್ಯಾರ್ಥಿನಿ ದಾನಮ್ಮಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ತೀವ್ರವಾಗಿ ಖಂಡಿಸುತ್ತೇವೆ. ಗೃಹಸಚಿವರ ವರ್ತನೆ ಗಮನಿಸಿದರೆ ಈ ಪ್ರಕರಣದಲ್ಲಿ ಸ್ಯಾಕ್ಷ್ಯ ನಾಶಪಡಿಸಿ ಮುಚ್ಚಿ ಹಾಕುವ ಹುನ್ನಾರ ಎದ್ದುಕಾಣುತ್ತಿದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಕೇಳಿಕೊಳ್ಳುತ್ತೇವೆ. ಇಲ್ಲವಾದಲ್ಲಿ ಮುಂದೆ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದೇ ವೇಳೆ ಜಿಲ್ಲೆಯ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನಯನೇತ್ರ ದಡ್ಡಲ್ಕಾಡ್, ಶೀನ ಮಾಸ್ತಿಕಟ್ಟೆ, ಎಸ್ಸಿ ಮೋರ್ಚಾ ಸದಸ್ಯರು ಉಮೇಶ್ ಉಮೇಶ್ ಕೋಟ್ಯಾನ್ ಮತ್ತು ವಿಠಲ್ ಸಾಲ್ಯಾನ್ ಉಪಸ್ಥಿತರಿದ್ದರು.