ಉಡುಪಿ,ಸೆ 04 (Daijiworld News/RD): ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸೆ.4 ರ ಬುಧವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, “ಕರ್ನಾಟಕಕ್ಕೆ ಇಂದು ಬ್ಲಾಕ್ ಡೇ. ಡಿ.ಕೆ.ಶಿವಕುಮಾರ್ ತಮ್ಮ ವಿದ್ಯಾರ್ಥಿ ಜೀವನದಿಂದ ಕಾಂಗ್ರೆಸ್ನಲ್ಲಿದ್ದಾರೆ. ಕಳೆದ 2-3 ವರ್ಷಗಳಿಂದ ಕೇಂದ್ರ ಅವರಿಗೆ ಕಿರುಕುಳಕ್ಕೊಳ ನೀಡುತ್ತಿದ್ದು, ಮೋದಿ ಮತ್ತು ಅಮಿತ್ ಶಾ ಅವರ ಪಿತೂರಿಯಿಂದಾಗಿ ಅವರನ್ನು ಬಂಧಿಸಲಾಗಿದೆ ಇದು ಖಂಡನೀಯ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಇಡಿ ಮತ್ತು ಐಟಿ ತನಿಖೆಗೆ ಸಹಕರಿಸಿದ್ದರೂ, ಅವರನ್ನು ಬಂಧಿಸುವುದು ಪ್ರಜಾಪ್ರಭುತ್ವದ ಕೊಲೆ ಎಂದರು. ಬಿಜೆಪಿಯು ಕಾಂಗ್ರೆಸ್ ಮುಕ್ತ ರಾಷ್ಟ್ರವನ್ನಾಗಿ ನಿರ್ಮಿಸಲು ಪ್ರಯತ್ನಿಸುತ್ತಿದೆ. ಇದನ್ನು ಪೂರೈಸಲು ಬಿಜೆಪಿ ಇಡಿ, ಐಟಿ, ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳನ್ನು ಬಳಸುತ್ತಿದೆ. ಈ ಮೂಲಕ ವಿರೋಧ ಪಕ್ಷವನ್ನು ನಾಶಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸೊರಕೆ ಆರೋಪಿಸಿದರು.
ಮಾಜಿ ಶಾಸಕ ಯು.ಆರ್.ಸಭಪತಿ, “ಇಡಿ ಡಿಕೆಶಿಯವರನ್ನು ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ವಿಚಾರಣೆ ನಡೆಸುತ್ತಿದ್ದು, ಆದರೆ ನಿನ್ನೆ ಇಡಿ ಅಧಿಕಾರಿಗಳು ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳಿ ಬಂಧಿಸಿದೆ. ಇದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತಿದ್ದು, ಭಾರತದಾದ್ಯಂತ ಪ್ರತಿಭಟನೆ ನಡೆಯಲಿದೆ”ಎಂದು ಅವರು ಹೇಳಿದರು.
ಪ್ರತಿಭಟನೆಯ ಸಂದರ್ಭ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಕೊಡವೂರು, ಪ್ರಖ್ಯಾತ್ ಶೆಟ್ಟಿ, ಕಿಶನ್ ಹೆಗ್ಡೆ, ಕೋಲ್ಕೆಬೈಲ್ ವೆರೋನಿಕಾ ಕಾರ್ನೆಲಿಯೊ, ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ ಮತ್ತು ಇನ್ನಿತರರು ಉಪಸ್ಥಿತರಿದ್ದರು.