ಸುಳ್ಯ, ಸೆ 04 (DaijiworldNews/SM): ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವ ಕ್ರಮ ದೇಶದಲ್ಲಿ ನಡೆಯುತ್ತಿರುವ ಸರ್ವಾಧಿಕಾರದ ಪ್ರತೀಕ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತಾನಾಡಿದ ಅವರು, ದೇಶದಲ್ಲಿ ಮೋದಿ ಮತ್ತು ಅಮಿತ್ಷಾ ಜೋಡಿ ವಿರೋಧ ಪಕ್ಷಗಳ ಸರ್ವನಾಶ ಮಾಡಲು ಹೊರಟಿದೆ. ಇದಕ್ಕಾಗಿ ಕಾನೂನಿನ ಮುಖವಾಡ ಹಾಕಿ ನಾಯಕರನ್ನು ಜೈಲಿಗಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ.
ಆರ್ಥಿಕ ಅಪರಾಧಗಳು ನಡೆದದ್ದೆ ಆದರೆ ಅದಕ್ಕೆ ಅದರದೇ ಆದ ನಿಯಮಾವಳಿಗಳಿವೆ. ಅವುಗಳನ್ನು ಬಿಟ್ಟು ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿ ಹಬ್ಬದಲ್ಲಿಯೂ ಭಾಗವಹಿಸಲು ಅವಕಾಶ ನೀಡದೆ ನಾಯಕರೊಬ್ಬರನ್ನು ಈ ರೀತಿ ತೇಜೋವಧೆ ಮಾಡಿರುವುದು ಖಂಡನೀಯ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಸರ್ವಾಧಿಕಾರದ ನಡೆ ಸರಿಯಲ್ಲ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಅವರು ಈ ಪ್ರಕರಣದಿಂದ ಗೆದ್ದು ಹೊರಬರುತ್ತಾರೆ ಎಂಬ ವಿಶ್ವಾಸ ನಮಗಿದೆ. ಅವರ ಬಂಧನವನ್ನು ಖಂಡಿಸಿ ರಾಜ್ಯ ಹಾಗೂ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಸೆ. ೬ರಂದು ಶುಕ್ರವಾರ ಬೆಳಿಗ್ಗೆ 10ರಿಂದ 12ರವರೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬಸ್ನಿಲ್ದಾಣದ ಬಳಿ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.