ಕಾಪು,ಸೆ 05 (Daijiworld News/RD): ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿವರ್ಹಿಸಿ, ಪ್ರಸ್ತುತ ಕಾರ್ಕಳ ಠಾಣೆಯಲ್ಲಿ ಕ್ರೈಂ ಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ. ಲಕ್ಷ್ಮಣ್ (58) ಅವರು ಸೆ. 4ರಂದು ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಕಾನ್ ಸ್ಟೇಬಲ್ ಹುದ್ದೆಯಿಂದ ಹಂತ ಹಂತವಾಗಿ ಮೇಲೇರಿ ಬಂದಿದ್ದ ಅವರು ಭಡ್ತಿಯೊಂದಿಗೆ ಪ್ರಸ್ತುತ ಎಸ್ಸೈ ಆಗಿ ಕರ್ತವ್ಯ ನಿರ್ಹಿಸುತ್ತಿದ್ದರು. ಈ ಹಿಂದೆ ಉಡುಪಿ ನಗರ ಠಾಣೆ , ಮಲ್ಪೆ,ಬ್ರಹ್ಮಾವರ, ಕಟಪಾಡಿ ಹೊರ ಠಾಣೆಯಲ್ಲಿ ಎಎಸೈ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ತಿಂಗಳಲ್ಲಿ ನಡೆದ ಪೊಲೀಸರ ವರ್ಗಾವಣೆಯ ವೇಳೆ ಕಾರ್ಕಳಕ್ಕೆ ವರ್ಗಾವಣೆಗೊಂಡಿದ್ದ ಅವರು ಅಸೌಖ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಬಿ ಲಕ್ಷ್ಮಣ್ ಮೂಲತಃ ಪುತ್ತೂರು ಮೂಲದವರು. ಅಪರಾಧ ಇಲಾಖೆಯಲ್ಲಿ ಐದು ವರ್ಷಗಳ ಕಾಲ ಕಾಪು ಪೊಲೀಸ್ ಠಾಣೆಯಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಭೇದಿಸಿದ್ದರು. ಇವರ ಕಾರ್ಯಕ್ಕೆ ಮೇಲಾಧಿಕಾರಿಗಳು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.