ಮಂಗಳೂರು,ಸೆ 06 (Daijiworld News/RD): ಮೀನುಗಾರಿಕಾ ಇಲಾಖೆಯು ‘ಮತ್ಸ್ಯದರ್ಶಿನಿ’ ಉಪಾಹಾರ ಮಂದಿರಗಳನ್ನು ರಾಜ್ಯದ ಎಲ್ಲಾ ಭಾಗಗಳಿಗೆ ವಿಸ್ತರಿಸಲಾಗುವುದು, ಈ ಮೂಲಕ ಮತ್ಸ್ಯ ಪ್ರಿಯರಿಗೆ ಮೀನಿನ ರುಚಿ ನೀಡಲಾಗುತ್ತದೆ ಜೊತೆಗೆ ಇಲ್ಲಿನ ಮೀನುಗಾರಿಕೆಗೆ ಈ ಮೂಲಕ ಹೆಚ್ಚು ಉತ್ತೇಜನ ನೀಡಲಾಗುತ್ತದೆ ಎಂದು ಮುಜರಾಯಿ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ದ.ಕ, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾ ಮಂಡಳಿಯ ವತಿಯಿಂದ ಅಭಿನಂದನೆಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೀನುಗಾರಿಕಾ ಇಲಾಖೆಯ ಮತ್ಸ್ಯದರ್ಶಿನಿ ಉಪಾಹಾರ ಮಂದಿರಗಳು ಪ್ರಸ್ತುತ ರಾಜ್ಯದ ಆಯ್ದ ಭಾಗಗಳಲ್ಲಿ ಸೀಮಿತವಾಗಿದೆ. ಹೀಗಾಗಿ ಕರಾವಳಿಯ ಮೀನಿನ ಸ್ವಾದವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿ ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸುವುದಾಗಿದೆ. ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಮತ್ಸ್ಯದರ್ಶಿನಿ ಆರಂಭ ಮಾಡುವುದರೊಂದಿಗೆ ಮೀನುಗಾರಿಕೆಯನ್ನು ಬೆಂಬಲಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮೀನುಗಾರ ಮಹಿಳೆಯರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಹೊಂದಿರುವ 50,000 ರು. ಸಾಲವನ್ನು ಮನ್ನಾ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ಮಧ್ಯೆ ಬ್ಯಾಂಕ್ಗಳು ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರುತ್ತಿರುವುದು ತಿಳಿದು ಬಂದಿದೆ. ಸಾಲ ಮರು ಪಾವತಿಗೆ ಒತ್ತಡ ಹೇರದಂತೆ ನಬಾರ್ಡ್ ಅಧಿಕಾರಿಗಳ ಮೂಲಕ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು. ಜೊತೆಗೆ ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಗಳಿವೆ. ಮುಂದಿನ ದಿನಗಳಲ್ಲಿ ಆ ಕುರಿತಾಗಿ ಯೋಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದಿದ್ದಾರೆ.
ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾ ಮಂಡಲದ ಅಧ್ಯಕ್ಷ ಯಶಪಾಲ ಸುವರ್ಣ,ಉಪಾಧ್ಯಕ್ಷರಾದ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ಕುಮಾರ್, ಬಿ.ಕೆ ಸಲೀಂ ಸಹಕಾರ ಸಂಘಗಳ ಉಪನಿಬಂಧಕರು ಮಂಗಳೂರು, ಪ್ರವೀಣ್ ನಾಯ್ಕ್ ಸಹಕಾರ ಸಂಘಗಳ ಉಪನಿಬಂಧಕರು ಉಡುಪಿ, ಶ್ರೀ ಕೆ ಗಣೇಶ್ ಮೀನುಗಾರಿಕಾ ಉಪನಿರ್ದೇಶಕರು ಉಡುಪಿ, ತಿಪ್ಪೆಸ್ವಾಮಿ ಮೀನುಗಾರಿಕಾ ಉಪನಿರ್ದೇಶಕರು ಮಂಗಳೂರು ಶ್ರೀಮತಿ ಸುಶ್ಮಿತಾ ರಾವ್ ಮೀನುಗಾರಿಕಾ ಸಹಾಯಕ ನಿರ್ದೇಶಕರು ಶ್ರೇಣಿ-1 ಮಂಗಳೂರು, ಮತ್ತು ಮೋಹನ್ ಬೆಂಗ್ರೆ ನವೀನ್ಚಂದ್ರ, ನಿತಿನ್ ಕುಮಾರ್, ಕಿಶೋರ್ ಸುವರ್ಣ ಮಲ್ಪೆ ಹಾಗೂ ಫೆಡರೇಶನಿನ ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭ ಮೀನುಗಾರಿಕಾ ಸಚಿವರನ್ನು ಶಾಲು, ಹಾರ, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಶ್ರೀ ಕೆ.ಗಣೇಶ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.