ಮಂಗಳೂರು, ಸೆ 06 (Daijiworld News/MSP): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರರ ಕಿರುಕುಳದಿಂದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ದ.ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ರಾಜೀನಾಮೆ ಬಹಿರಂಗವಾಗುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ಸಿಗರು ಪ್ರತಿಭಟನೆಗೆ ಇಳಿದಿದ್ದು, ಈ ಸಂದರ್ಭ ಮಾತನಾಡಿದ ಹರೀಶ್ ಕುಮಾರ್, ಬಿಜೆಪಿ ಸರ್ಕಾರದಿಂದ ಐಎಎಸ್ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದ್ದು, ಇದೇ ಒತ್ತಡದಿಂದ ಸಸಿಕಾಂತ್ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಅಧಿಕಾರಿಗಳು ಮಾತ್ರವಲ್ಲ ಕೆಳವರ್ಗದ ನೌಕರರು ರಾಜೀನಾಮೆ ನೀಡುವ ಪರಿಸ್ಥಿತಿ ಬರಲಿದೆ ಎಂದು ಆರೋಪಿಸಿದರು.
ಆ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ, ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮರಳು ದಂಧೆಗೆ ಮುಂದಾಗಿತ್ತು. ತಮಗೆ ಸಂಬಂಧಿಸಿದ ಜನರಿಗೆ ಮರಳು ದಂಧೆಗೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದಿದ್ದಾರೆ. ಸುಖಾಸುಮ್ಮನೆ ಕಾರಣವಿಲ್ಲದೇ ರಾಜೀನಾಮೆ ನೀಡುವಂತಹ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅಲ್ಲ ಎಂದಿದ್ದಾರೆ.