ಧಾರವಾಡ 27: ಕಳಸಾ ಬಂಡೂರಿ ಹಾಗೂ ಮಹದಾಯಿ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ‘ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಸಮಿತಿ’ ಸೇರಿದಂತೆ ವಿವಿಧ ಕನ್ನಡಪರ, ರೈತ ಸಂಘಟನೆಗಳು ಡಿ 27 ರ ಬುಧವಾರ ಬಂದ್ ನಡೆಸುತ್ತಿದ್ದು ಆ ಮೂಲಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಉತ್ತರ ಕರ್ನಾಟಕದ ಈ ಎರಡು ನೀರಾವರಿ ಯೋಜನೆ ಜಾರಿಗೆ ಸಂಬಂದಿಸಿದಂತೆ ರಾಜ್ಯದೆಲ್ಲೆಡೆ ಹಕ್ಕೋತ್ತಾಯ ಜೋರಾಗತೊಡಗಿದೆ. ಇನ್ನು ಬಂದ್ ಹಿನ್ನಲೆಯಲ್ಲಿ ಈ ಭಾಗದ ಕೆಲ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. .ಕಳೆದ ಬಾರಿ ನಡೆದ ಬಂದ್ ವೇಳೆ ಗಲಾಟೆ ಹೆಚ್ಚಾಗಿದ್ದರಿಂದ ಈ ಸಲ ಪೊಲೀಸರ ಬಂದೋಬಸ್ತ್ ಹೆಚ್ಚಿಸಲಾಗಿದೆ. ಧಾರವಾಡ ಜಿಲ್ಲೆಯ ಬಂದೋಬಸ್ತ್ಗಾಗಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.ಹುಬ್ಬಳ್ಳಿ ನಗರದಲ್ಲಿ ಬಂದ್ ಕಾವು ಹೆಚ್ಚಿದೆ. ಚನ್ನಮ್ಮ ವೃತ್ತ, ಹೊಸೂರು ವೃತ್ತ ಸೇರಿದಂತೆ ಅಲ್ಲಲ್ಲಿ ಟೈರ್ ಗಳಿಗೆ ಬೆಂಕಿ ಹಾಕಿ ಹಚ್ಚಿ ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಬಾಗಲಕೋಟೆ, ಗದಗ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಬಂದ್ ಕಾವು ಹೆಚ್ಚಿದೆ.