ಕಾಸರಗೋಡು ಡಿ 27: ಹೊಳೆಗೆ ಬಿದ್ದು ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಗರದ ವಿದ್ಯಾನಗರ ಠಾಣಾ ವ್ಯಾಪ್ತಿಯ ಪಾಡಿ ಚೇಳಕ್ಕರ ದಲ್ಲಿ ಡಿ 27 ರ ಮಂಗಳವಾರ ಸಂಜೆ ನಡೆದಿದೆ. ಮೃತ ಬಾಲಕಿಯನ್ನು ಮುನ್ನಾಡ್ ನ ಕಮಲಾಕ್ಷ ರವರ ಪುತ್ರಿ ಸ್ವಾತಿ ಎಂದು ಗುರುತಿಸಲಾಗಿದೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಸಮೀಪದ ಹೊಳೆಬದಿಗೆ ತೆರಳಿದ್ದು ಈ ಸಂದರ್ಭದಲ್ಲಿ ದುರಂತ ನಡೆದಿದೆ. ಕ್ರಿಸ್ ಮಸ್ ರಜೆಯಾದುದರಿಂದ ಪಾಡಿಯಲ್ಲಿರುವ ಅಜ್ಜಿ ಮನೆಗೆ ಬಂದಿದ್ದಳು. ಮಕ್ಕಳ ಜೊತೆ ಆಟವಾಡುತ್ತಿದ್ದ ಸ್ವಾತಿ ಬಳಿಕ ಹೊಳೆ ಬದಿಗೆ ತೆರಳಿದ್ದಳು ಎನ್ನಲಾಗಿದೆ. ಈಕೆ ಜೊತೆಗಿದ್ದ ಇತರ ಮಕ್ಕಳು ಬೊಬ್ಬೆ ಹಾಕಿದಾಗ ದಾವಿಸಿ ಬಂದ ಸ್ಥಳೀಯರು ಬಾಲಕಿಯನ್ನು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.